ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ 10 ವರ್ಷಗಳಲ್ಲಿಯೇ ಈ ವರ್ಷ ಅತಿ ಹೆಚ್ಚು ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಬಾರಿ ಶೇ.81.30ರಷ್ಟು ವಿದ್ಯಾರ್ಥಿಗಳು, 90.29ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು. ವಿಜಯಪುರ ಜಿಲ್ಲೆ ವಿದ್ಯಾರ್ಥಿ ಅಮಿತ್ ಮಾದರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ತುಮಕೂರಿನ ಬಿ.ಆರ್.ಭೂಮಿಕಾ ರಾಜ್ಯಕ್ಕೆ ಎರಡನೇ ಸ್ಥಾನ ಬಂದಿದ್ದಾರೆ.
ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಅಮಿತ್ ಮಾದರ್, ತುಮಕೂರು ಜಿಲ್ಲೆಯ ಬಿ.ಆರ್.ಭೂಮಿಕಾ, ಹಾವೇರಿ ಜಿಲ್ಲೆಯ ಪ್ರವೀಣ್ ನೀರಲಗಿ, ಬೆಳಗಾವಿಯ ಸಹನಾ ರಾಯರ್, ವಿಜಯಪುರ ಜಿಲ್ಲೆಯ ಐಶ್ವರ್ಯ ಕನಸೆ, ಉಡುಪಿಯ ಗಾಯತ್ರಿ, ಬೆಂಗಳೂರಿನ ಸದಾಶಿವನಗರದ ಪೂರ್ಣಪ್ರಜ್ಞಾ ಶಾಲೆಯ ಅನಘಾ ಎಂ.ಮೂರ್ತಿ, ಚಿಕ್ಕಮಗಳೂರಿನ ಎಸ್.ಎಸ್.ಆಕೃತಿ ಸೇರಿದಂತೆ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿದ್ದಾರೆ.