ಬೆಂಗಳೂರು: 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ.
ಇಂದು ಮಧ್ಯಾಹ್ನ 12.30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ. ಮಧ್ಯಾಹ್ನ 1 ಗಂಟೆ ಬಳಿಕ ಇಲಾಖೆಯ ವೆಬ್‌ಸೈಟ್ karresults.nic.in ನಲ್ಲಿ ಫಲಿತಾಂಶ ಲಭ್ಯವಾಗಲಿದೆ.
ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್ ನಂಬರ್‌ಗಳಿಗೆ SMS ಮೂಲಕ ಫಲಿತಾಂಶ ಕಳುಹಿಸಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವರು ಶುಭ ಹಾರೈಸಿದ್ದಾರೆ.
2 ವರ್ಷಗಳ ಬಳಿಕ ನಡೆದ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸ್ನೇಹಿ ನಿರ್ಧಾರ ಕೈಗೊಳ್ಳಲು ಇಲಾಖೆ ನಿರ್ಧಾರ ಮಾಡಿದೆ. ಫೇಲ್ ಆಗುವ ವಿದ್ಯಾರ್ಥಿಗಳಿಗೂ ಸಂಜೀವಿನಿ ನೀಡಲು ಮುಂದಾಗಿದೆ. ಒಂದೆರಡು ಅಂಕಗಳಿಂದ ಫೇಲ್ ಆಗಬಹುದಾದ ವಿದ್ಯಾರ್ಥಿಗಳಿಗೂ ಪಾಸ್ ಅಂಕ ನೀಡಿ ಉತ್ತೀರ್ಣಗೊಳಿಸಲು ನಿರ್ಧರಿಸಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಒಂದೆರಡು ವಿಷಯಗಳಲ್ಲಿ 1 ಅಥವಾ 2 ಅಂಕಗಳಿಂದ ಫೇಲ್ ಆಗುವ ಹಂತದಲ್ಲಿದ್ದರೆ ಅಂತಹವರಿಗೆ ಗ್ರೇಸ್ ಅಂಕ ನೀಡಿ ಪಾಸ್ ಮಾಡಲು ಮುಂದಾಗಿದೆ. ಅದಕ್ಕೂ ಮುನ್ನ ಶಿಕ್ಷಣ ಇಲಾಖೆಯ ಮಾನದಂಡಗಳನ್ನು ಅನ್ವಯಿಸಬೇಕಾಗುತ್ತದೆ.
ಮಾರ್ಚ್ 28 ರಿಂದ ಏಪ್ರಿಲ್ 11ರ ವರಗೆ 2022ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ಈ ಬಾರಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು. ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.