Breaking News

ಸೋಂಕಿತರ ಜೀವ ರಕ್ಷಕ ಕವಚ ಕೋವಿಡ್ ಕಾಳಜಿ ಕೇಂದ್ರ

Spread the love

ಹುಬ್ಬಳ್ಳಿ- ಕೋವಿಡ್ ಎರಡನೇ ಅಲೆಯಲ್ಲಿ ಸೋಂಕು ಗ್ರಾಮೀಣ ಭಾಗಗಳಿಗೂ ತನ್ನ ಕಬಂಧ ಬಾಹುವನ್ನು ಚಾಚಿದೆ.‌ ಸೂಕ್ತ ವೈದ್ಯಕೀಯ ಸವಲತ್ತುಗಳು ಹಳ್ಳಿಗಳಲ್ಲಿ ಲಭಿಸುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ , ಹಳ್ಳಿಗಳಲ್ಲಿ ಕೋವಿಡ್ ಸೋಂಕಿತರು ಮನೆಗಳಲ್ಲಿ ಇದ್ದು ಸೋಂಕು ಉಲ್ಬಣಗೊಳ್ಳದಂತೆ ಹಾಗೂ ಇತರರಿಗೂ ಹರಡದಂತೆ ತಡೆಯುವುದು ಸುಲಭವಲ್ಲ.
ಗ್ರಾಮೀಣ ಜನರ ಜೀವ ರಕ್ಷಣೆ ಹಾಗೂ ಲಕ್ಷಣ ರಹಿತ ಕೋವಿಡ್ ಸೋಂಕಿತರಿಗಾಗಿ, ಸರ್ಕಾರ ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ತೆರದಿದೆ. ಇಲ್ಲಿ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಯನ್ನು ನೇಮಿಸಿ, ಸೋಂಕಿತರಿಗೆ ಪೌಷ್ಠಿಕ ಆಹಾರ, ವಸತಿ, ಅಗತ್ಯ ಔಷಧಗಳು ಹಾಗೂ ತುರ್ತು ಸಂದರ್ಭದಲ್ಲಿ ಹತ್ತಿರದ ಮೇಲ್ದರ್ಜೆ ಆಸ್ಪತ್ರೆಗಳಿಗೆ ರವಾನಿಸಲು ವ್ಯವಸ್ಥೆ ಕಲ್ಪಿಸಿದೆ.
ಕೋವಿಡ್ ಕಾಳಜಿ ಕೇಂದ್ರ ಹಾಗೂ ಕೇರ್ ಸೆಂಟರ್ ಸ್ವರೂಪದಲ್ಲಿ ಒಂದೇ ಅನಿಸಿದರೂ, ಕಾರ್ಯವೈಖರಿಯಲ್ಲಿ ಸ್ವಲ್ಪ ಅಂತರವಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕಿತರನ್ನು ಕಳಂಕ ದೃಷ್ಟಿಯಿಂದ ನೋಡುವ ಸಾಧ್ಯತೆಯಿದೆ. ಹೀಗಾಗಿ ಧಾರವಾಡ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್‌ಗಳ ಬದಲಾಗಿ ಕಾಳಜಿ ಕೇಂದ್ರ ಎಂಬ ಹೆಸರನ್ನು ಬಳಸುತ್ತಿದೆ. ಕಾಳಜಿ ಕೇಂದ್ರದಲ್ಲಿನ ಬೆಡ್‌ಗಳ ಸಂಖ್ಯೆ ಸೀಮಿತವಾಗಿರುತ್ತದೆ. ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಳಜಿ ಕೇಂದ್ರಕ್ಕೆ ಆಗಮಿಸಿದರೆ, ಸೂಕ್ತ ಬೆಡ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.‌ ಆದರೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಹೆಚ್ಚಿನ ಬೆಡ್ ವ್ಯವಸ್ಥೆಗಳಲಿದ್ದು, ಸ್ಥಾನಿಕವಾಗಿ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ಸಹ ನೇಮಿಸಲಾಗಿರುತ್ತದೆ.
ಹುಬ್ಬಳ್ಳಿ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳ ವಿವರ
ಹುಬ್ಬಳ್ಳಿ ತಾಲೂಕಿನಲ್ಲಿ ಪ್ರಸ್ತುತ 10 ಕೋವಿಡ್ ಕಾಳಜಿ ಕೇಂದ್ರ ಹಾಗೂ 1 ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲಾಗಿದೆ. ಒಟ್ಟು 363 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. 65 ಜನರನ್ನು ಕೋವಿಡ್ ಕಾಳಜಿ ಕೇಂದ್ರಗಳಲ್ಲಿ ದಾಖಲಿಸಿ, ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ನಿಗಾದಲ್ಲಿ ಇಡಲಾಗಿದೆ.‌
ತಾಲೂಕಿನ ಕೋಳಿವಾಡ, ನೂಲ್ವಿ, ಬು.ಹರಳಿಕಟ್ಟಿ, ವರೂರು ಗ್ರಾಮಗಳಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಬ್ಯಾಹಟ್ಟಿ, ಇಂಗಳಹಳ್ಳಿ, ಕುಸುಗಲ್, ಬಂಡಿವಾಡ, ಹಳಿಯಾಳ, ಸುಳ್ಳ ಗ್ರಾಮಗಳಲ್ಲಿ ಶಾಲೆಗಳಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಅಂಚಟಗೇರಿಯ ಮೊರಾರ್ಜಿ ವಸಿತಿ ಶಾಲೆಯಲ್ಲಿ‌ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತದೆ.
ಕಾಳಜಿ ಕೇಂದ್ರಗಳಲ್ಲಿರುವ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಿದೆ. ಪೌಷ್ಠಿಕ‌ ಆಹಾರ, ವೈದ್ಯಕೀಯ ನಿಗಾ ಹಾಗೂ ಉತ್ತಮ ವಾತಾವರಣದ ಪರಿಣಾಮ ಸೋಂಕಿತರು ಬೇಗನೇ ಗುಣಮುಖರಾಗುತ್ತಿದ್ದಾರೆ. ನೂಲ್ವಿ ಗ್ರಾಮದ ವಿದ್ಯಾರ್ಥಿ ನಿಲಯದಲ್ಲಿನ 8‌ ಸೋಂಕಿತರ ಪೈಕಿ 4 ಜನರು ಗುಣಮುಖರಾಗಿ ಮಂಗಳವಾರ ಮನೆಗಳಿಗೆ ತೆರಳಿದರು. ತಹಶೀಲ್ದಾರ್ ಹಾಗೂ ವೈದ್ಯಾಧಿಕಾರಿಗಳು ಗುಣಮುಖರಾದವರಿಗೆ ಹೂ ನೀಡಿ ಚಪ್ಪಾಳೆಯೊಂದಿಗೆ ಬೀಳ್ಕೊಟ್ಟರು.
ಸೋಂಕಿನಿಂದ ಗುಣಮಖರಾದ ಹನುಮಂತಪ್ಪ ಫಕೀರಪ್ಪ ನೂಲ್ವಿ ಮಾತನಾಡಿ, ಮೇ.19 ರಂದು ವೈದ್ಯರ ಸೂಚನೆಯ ಮೇರೆಗೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೆ. 20 ತಾರೀಖಿನಂದು ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿತು. ವೈದ್ಯರು ಮನೆಯಲ್ಲಿ ಪ್ರತ್ಯೇಕವಾಸದಲ್ಲಿರಲು ತಿಳಿಸಿದರು. ನಂತರ ತಹಶೀಲ್ದಾರ್,ವೈದ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಗಮಿಸಿ, ಮನೆಯವರ ಸುರಕ್ಷತೆ ದೃಷ್ಟಿಯಿಂದ ಕಾಳಜಿ ಕೇಂದ್ರಕ್ಕೆ ದಾಖಲಾಗುವಂತೆ ತಿಳಿಸಿದರು. ಮೇ.25 ರಿಂದ ಕಾಳಜಿ ಕೇಂದ್ರದಲ್ಲಿದ್ದೇನೆ. ಇಲ್ಲಿಗೆ ಬಂದಾಗಿನಿಂದಲೂ ಉತ್ತಮ ಔಷಧೋಪಚಾರ, ಊಟ ನೀರು‌ ಸೇರಿದಂತೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ. ಈಗ ಕೋವಿಡ್ ನಿಂದ ಗುಣಮುಖನಾಗಿ ಮನೆಗೆ ತೆರಳುತ್ತಿದ್ದೇನೆ. ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದಗಳು ಎಂದರು.
ಸೋಂಕಿನಿಂದ ಗುಣಮಖರಾದ ನಾಗರಾಜ ಯಪ್ಪಲ್ಪ ರವೆಣ್ಣನವರ ಮಾತನಾಡಿ, ಮೇ.21 ರಂದು ನನಗೆ ಕೋವಿಡ್ ಪಾಸಿಟಿವ್ ರಿಪೋರ್ಟ್ ಬಂದಿತು. ಇದಕ್ಕೆ ಮೊದಲು ನನ್ನ ತಾಯಿ ಕೋವಿಡ್‌ಗೆ ತತ್ತಾಗಿ ಮರಣ ಹೊಂದಿದ್ದರು. ಈ ಕಾರಣದಿಂದಾಗಿ ಮನೆಯಲ್ಲಿ ಹಲವು ಮಂದಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಜಿಲ್ಲಾಡಳಿತ ಹಾಗೂ ಗ್ರಾಮ‌ ಪಂಚಾಯಿತಿ ಅಧಿಕಾರಿಗಳು ಹಾಗೂ ವೈದ್ಯಾರು ಮನೆಗೆ ಆಗಮಿಸಿ ಕೋವಿಡ್ ಕಾಳಜಿ ಕೇಂದ್ರಲ್ಲಿ 10 ಪ್ರತ್ಯೇಕವಾಸದಲ್ಲಿ ಸೂಚಿಸಿದರು. ಇದರಿಂದ ಬೇರೆಯವರಿಗೆ ಕೋವಿಡ್ ಹರಡುವುದಿಲ್ಲ ಎಂದ ತಿಳಿಸಿದರು. ಅವರ ಕೋರಿಕೆಯಂತೆ ಕಾಳಜಿ ಕೇಂದ್ರದಲ್ಲಿ ದಾಖಲಾದೆ. ಕಾಳಜಿ ಕೇಂದ್ರದಲ್ಲಿ ಬೆಡ್ ಹಾಗೂ ಊಟದ ವ್ಯವಸ್ಥೆ ಉತ್ತಮವಾಗಿ ಕಲ್ಪಿಸಿಕೊಟ್ಟಿದ್ದಾರೆ. ಆರೋಗ್ಯ ಇಲಾಖೆಯಿಂದ ಕೋವಿಡ್ ಕಿಟ್‌ಗಳನ್ನು ಸಹ ನೀಡಿದರು. ಪ್ರತಿದಿನ ಆರೋಗ್ಯ ಇಲಾಖೆಯಿಂದ ಎರೆಡು ಬಾರಿ ಆಗಮಿಸಿ ತಪಾಸಣೆ ನಡೆಸುತ್ತಿದ್ದರು. ಧೈರ್ಯ ಹೇಳುತ್ತಿದ್ದರು. ಇಂದು ಗುಣಮುಖನಾಗಿದ್ದೇನೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದಗಳು. ಸೊಂಕಿತರು ಮನೆಯಲ್ಲಿ ಇರದೆ ಕಾಳಜಿ ಕೇಂದ್ರ ದಾಖಲಾಗಬೇಕು. ಇದರಿಂದ ಕೋವಿಡ್ ಸರಪಳಿ ಮುರಿಯಲು ಸಾಧ್ಯವಾಗುತ್ತದೆ ಎಂದರು.
ಮನೋಲ್ಲಾಸ ಹೆಚ್ಚಿಸಲು ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
ಅಂಚಟಗೇರಿ ಮೊರಾರ್ಜಿ ವಸಿತಿ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ 22 ಸೋಂಕಿತರು ಆಶ್ರಯ ಪಡೆದಿದ್ದಾರೆ. ಇವರ ಆರೋಗ್ಯ ಕಾಳಜಿಯೊಂದಿಗೆ, ಮನೋಲ್ಲಾಸ ಹೆಚ್ಚಿಸಲು ಕ್ರೀಡೆ, ವ್ಯಾಯಾಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ. ವಾಲಿಬಾಲ್, ರಿಂಗ್, ಸ್ಕಿಪ್ಪಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸೋಂಕಿತರು ಪಾಲ್ಗೊಳ್ಳುತ್ತಿದ್ದಾರೆ. ಹಾಡು, ಕುಣಿತ ಅಂತ್ಯಾಕ್ಷರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸೋಂಕಿತರಿಗೆ ಖುಷಿ ನೀಡುತ್ತಿವೆ.‌ ಮಂಗಳವಾರ ಸಂಜೆ ತಹಶೀಲ್ದಾರ್ ಪ್ರಕಾಶ್ ನಾಶಿ ಹಾಗೂ ಶಶಿಧರ ಮಾಡ್ಯಾಳ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಸೋಂಕಿತರಿಗೆ ಲಭಿಸುತ್ತಿರುವ ಚಿಕಿತ್ಸೆ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಜಿಲ್ಲಾ ಹೋಮ್ ಐಸೋಲೇಷನ್ ಹಾಗೂ ಅಂಚಟಗೇರಿ ಕೋವಿಡ್ ಕೇರ್ ಸೆಂಟರ್‌ನ ನೋಡಲ್ ಅಧಿಕಾರಿ ಡಾ.ಸಂಪತ್ ಸಿಂಗ್ ರಂಗವಾಲೆ ಮಾತನಾಡಿ ಕೋವಿಡ್ ಕೇರ್ ಸೆಂಟರ್‌‌ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಮೂರು ಪಾಳೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಪ್ರತಿದಿ‌ನ ನಿಯಮಿತವಾಗಿ ಸೋಂಕಿತರ ಆಕ್ಸಿಜನ್ ಸ್ಯಾಚುರೇಷನ್, ದೇಹದ ಉಷ್ಟತೆ ಪರೀಕ್ಷಿಸುತ್ತೇವೆ. ಅಗತ್ಯ ಔಷದ ಹಾಗೂ ಮಾತ್ರೆಗಳನ್ನು ಸಹ ವಿತರಿಸಲಾಗುವುದು. ಆಕ್ಸಿಜನ್ ಅವಶ್ಯಕತೆ‌ ಇರುವರಿಗೆ ಕಾನ್ಸಟ್ರೇರ್ಸ್ ಮೂಲಕ ಆಕ್ಸಿಜನ್ ಸರಬರಾಜು ಮಾಡಲಾಗುವುದು. ಸೋಂಕಿತರ ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಕಾಣಿಸಿಕೊಂಡರೆ ತಕ್ಷಣ ಆಬ್ಯುಲೆನ್ಸ್ ಮೂಲಕ ಮೇಲ್ದರ್ಜೆ ಆಸ್ಪತ್ರೆ ದಾಖಲಿಸಲಾಗುವುದು ಎಂದರು.
ತಹಶಿಲ್ದಾರರ ಪ್ರಕಾಶ್ ನಾಶಿ ಮಾತನಾಡಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಯೊಂದಿಗೆ ಮನೋರಂಜೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ. ಅಂಚಟಗೇರಿಯಲ್ಲಿ ಸುಸಜ್ಜಿತವಾದ 200 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಗ್ರಾಮದ ಜನರ ಮನ ಒಲಿಸಿ ಹೆಚ್ಚಿನ ಸಂಖ್ಯೆಯ ಸೊಂಕಿತರನ್ನು ಕೋವಿಡ್ ಕಾಳಜಿ ಕೇಂದ್ರಕ್ಕೆ ದಾಖಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಆರ್.ಹೆಚ್.ಹಿತ್ತಲಮನಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

About Karnataka Junction

[ajax_load_more]

Check Also

ಬಾಬಾ ಸಾಹೇಬರಿಗೆ ಅಪಮಾನ – ಬಹಿರಂಗ ಚರ್ಚೆಗೆ ಬೆಲ್ಲದ ಸವಾಲು: ಅರವಿಂದ ಬೆಲ್ಲದ

Spread the loveಹುಬ್ಬಳ್ಳಿ:ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ …

Leave a Reply

error: Content is protected !!