ಹುಬ್ಬಳ್ಳಿ: ಶಿಕ್ಷಕರ ಕೊರತೆಯಿಂದಾಗಿ ನಮ್ಮ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಗುಡಗೇರಿ ಗ್ರಾಮದ ವಿದ್ಯಾರ್ಥಿಗಳ ಪಾಲಕರು ಆಗ್ರಹಿಸಿದ್ದಾರೆ.
ಗ್ರಾಮದ ಫಕೀರಪ್ಪ ಚನ್ನಬಸಪ್ಪ ಮತ್ತೂರು ಮಾತನಾಡಿ ‘ಸರ್ಕಾರದಿಂದ ಪ್ರಾರಂಭವಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆ ಕೊಠಡಿಗಳು ಹಾಗೂ ಇನ್ನೂ ಕೆಲವೆಡೆ ಶಿಕ್ಷಕರ ಕೊರತೆಯಾಗುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮಾಹಿತಿ ಪಡೆದು ಐದು ದಿನಗಳ ಒಳಗೆ ಸಮಸ್ಯೆ ಬಗೆಹರಿಸದೇ ಹೋದರೆ ಉಗ್ರಹೋರಾಟ ಮಾಡಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಂಯೋಜಕ ಭೀಮಪ್ಪ ಸಾವಳಗಿ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಭೀಮಪ್ಪ ಸಾವಳಗಿ ಪ್ರತಿಕ್ರಿಯಿಸಿ ‘ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರದ ಆದೇಶವಾಗಿದ್ದು, ಶೀಘ್ರದಲ್ಲಿ ಶಿಕ್ಷಕರನ್ನು ನೇಮಿಸಿ ತರಗತಿಯನ್ನು ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.
ಅಶೋಕ್ ತಿರ್ಲಾಪುರ್, ನಾಗರಾಜ ಬೂದಿಹಾಳ, ಆರ್.ಪಿ. ಭೂತಣ್ಣನವರ್, ಎನ್.ಆರ್. ಹಿರೇಗೌಡರ, ಆರ್.ಬಿ.ನೇಮನಗೌಡ, ಭರಮಪ್ಪ ಮಠದ ಇದ್ದರು.
