ಚಿಕ್ಕಮಗಳೂರು: ನನ್ನ ಗಾಡಿ ಮುಟ್ಟಬೇಡಿ, ನಾನೇ ಬೆಂಕಿ ಹಚ್ಚುತ್ತೇನೆ ಎಂದು ನಗರಸಭೆ ಅಧಿಕಾರಿಗಳ ಎದುರು ವ್ಯಾಪಾರಿ ಗಾಡಿಗೆ ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯ ಬೀದಿಯಲ್ಲಿ ಪ್ರತಿನಿತ್ಯ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡಿಕೊಂಡು 200-300 ರೂ. ದುಡಿದು ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಆದರೆ ನಗರ ಸಭೆ ಅಧಿಕಾರಿಗಳು ರಸ್ತೆ ಬದಿ ವ್ಯಾಪಾರ ನಡೆಸಬಾರದು ಎಂದು ವ್ಯಾಪಾರಿಗಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು.
ಈ ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿದ್ದವರಲ್ಲಿ ಬಡ ವ್ಯಾಪಾರಿಯೊಬ್ಬ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇಂದು ಈ ವ್ಯಾಪಾರಿಯ ಗಾಡಿಯನ್ನು ಹೊತ್ತೊಯ್ಯಲು ನಗರಸಭೆ ಸಿಬ್ಬಂದಿ ಬಂದಿದ್ದರು. ಇದರಿಂದ ರೊಚ್ಚಿಗೆದ್ದ ಬಡ ವ್ಯಾಪಾರಿಯು, ನಮ್ಮ ಹೊಟ್ಟೆ ಮೇಲೆ ಹೊಡಿಯುತಿದ್ದೀರಾ, ನಾನೇ ಬೆಂಕಿ ಹಾಕ್ತೀನಿ ಎಂದು ತನ್ನ ಗಾಡಿಗೆ ತಾನೇ ಬೆಂಕಿ ಹಾಕಿ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.