ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಸರಕಾರಿ ಅಧಿಕಾರಿ ರಾಹುಲ್ ಭಟ್ ಅವರ ಕೊಲೆ ಖಂಡಿಸಿ ಕಾಶ್ಮೀರಿ ಪಂಡಿತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಭಯೋತ್ಪಾದಕ ಸಂಘಟನೆ ಲಶ್ಕರೆ ಇಸ್ಲಾಮ್, ‘ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ’ ಎಂದು ಕಾಶ್ಮೀರಿ ಪಂಡಿತರಿಗೆ ಕೊಲೆ ಬೆದರಿಕೆ ಹಾಕುವ ಮೂಲಕ ದುಸ್ಸಾಹಸ ತೋರಿದೆ.
ಜಮ್ಮು ಮತ್ತು ಕಾಶ್ಮೀರದ ಹವಾಲದ ನಿರಾಶ್ರಿತರ ಕಾಲೊನಿಯ ಅಧ್ಯಕ್ಷರಿಗೆ ಪತ್ರ ಬರೆದಿರುವ ಲಶ್ಕರೆ ಇಸ್ಲಾಮ್, ‘ಕಾಶ್ಮೀರಿ ಪಂಡಿತರೇ ಪುಲ್ವಾಮಾ ಪ್ರದೇಶವನ್ನು ಬಿಟ್ಟು ಹೊರಡಿ. ಇಲ್ಲದಿದ್ದರೆ ಕೊಲೆಯಾಗುವಿರಿ’ ಎಂದು ಬೆದರಿಸಿದೆ.
ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪತ್ರಕ್ಕೆ ಲಶ್ಕರೆ ಇಸ್ಲಾಮ್‌ನ ಕಮಾಂಡರ್ ಸಹಿ ಹಾಕಿದ್ದಾನೆ. ಅಲ್ಲದೇ ಪತ್ರದಲ್ಲಿ, “ವಲಸಿಗರೆ ಮತ್ತು ಆರ್ ಎಸ್‌ಎಸ್ ಏಜೆಂಟರೆ ಕಾಶ್ಮೀರ ಬಿಟ್ಟು ತೊಲಗಿ. ಇಲ್ಲದಿದ್ದರೆ ಕೊಲೆಗೆ ಸಿದ್ಧರಾಗಿರಿ,’ ಎಂದು ಹೆದರಿಸಿರುವ ಭಯೋತ್ಪಾದಕ ಸಂಘಟನೆ, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.