ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನದ ಆಘಾತದಿಂದ ಇನ್ನೂ ಕನ್ನಡ ಚಿತ್ರರಂಗ ಹಾಗೂ ಕಲಾವಿದರು ಚೇತರಿಸಿಕೊಂಡಿಲ್ಲ. ಅದರ ಮೇಲೆ ಮತ್ತೆ ಮತ್ತೆ ಕಲಾವಿದರಿಗೆ ಆಘಾತದ ಮೇಲೆ ಆಘಾತಗಳು ಆಗುತ್ತಲೇ ಇವೆ. ಇದೀಗ ಕನ್ನಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಯುವ ನಟಿಯೊಬ್ಬರು ಮೃತಪಟ್ಟಿದ್ದಾರೆ. ಧಾರಾವಾಹಿ ನಟಿ ಚೇತನಾ ರಾಜ್ ಎಂಬುವರು ನಿಧನರಾಗಿದ್ದಾರೆ. ಫ್ಯಾಟ್ ಸರ್ಜರಿ ವೇಳೆ ಆಸ್ಪತ್ರೆಯಲ್ಲೇ ಚೇತನಾ ಸಾವನ್ನಪ್ಪಿದ್ದು, ವೈದ್ಯರ ವಿರುದ್ಧ ಮೃತಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಬರುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ಚೇತನಾ ರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ‘ಹವಾಯಾಮಿ’ ಸಿನಿಮಾದಲ್ಲೂ ನಟಿಸಿದ್ದರು.
ಪೋಷಕರಿಗೆ ಮಾಹಿತಿ ನೀಡದೇ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ನಟಿ ಮುಂದಾಗಿದ್ದರು. ನಿನ್ನೆ (ಮೇ 16) ಬೆಳಿಗ್ಗೆ 9,30 ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದರು. ನಂತರ ವಿಚಾರ ಗೊತ್ತಾಗಿ ಶೆಟ್ಟಿ ಆಸ್ಪತ್ರೆಗೆ ಪೋಷಕರು ಧಾವಿಸಿದ್ದರು. ಶಸ್ತ್ರಚಿಕಿತ್ಸೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಪರಿಸ್ಥಿತಿ ಗಂಭೀರವಾಗಿತ್ತು. ನಾಲ್ಕು ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಪ್ರಯತ್ನಿಸಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟರು. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಚೇತನಾ ರಾಜ್ ಮೃತಪಟ್ಟಿದ್ದಾರೆ.
ಪೋಷಕರ ಅನುಮತಿ ಇಲ್ಲದೆ ಸರ್ಜರಿ ಹೇಗೆ ಮಾಡಿದರು. ಶೆಟ್ಟಿ ಆಸ್ಪತ್ರೆಯವರೇ ಚೇತನಾ ರಾಜ್ ಸಾವಿಗೆ ಕಾರಣ ಎಂದು ಮೃತ ಚೇತನಾ ರಾಜ್ ಪೋಷಕರು ಆರೋಪಿಸುತ್ತಿದ್ದಾರೆ.