ಶಿವಮೊಗ್ಗ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಟೆಂಪೋ ಟ್ರಾವೆಲರ್ (ಟಿಟಿ) ಚಾಲಕನಿಗೆ ಇದ್ದಕ್ಕಿದ್ದಂತೆ ಮೂರ್ಛೆ ರೋಗ ಕಾಣಿಸಿಕೊಂಡು, ಟೆಂಪೋ ಟ್ರಾವೆಲರ್ ಅಪಘಾತಕ್ಕೀಡಾದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿ ಮೂಲದ 10 ಮಂದಿ ಪ್ರವಾಸಿಗರು ಸಿಗಂದೂರು ಚೌಡೇಶ್ವರಿದೇವಿ ದರ್ಶನಕ್ಕೆ ಆಗಮಿಸಿದ್ದರು. ದರ್ಶನ ಮಾಡಿ ವಾಪಸ್ ತೆರಳುತ್ತಿದ್ದರು. ಇಲ್ಲಿನ ಕಳಸವಳ್ಳಿ ಗ್ರಾಮದ ಬಳಿ ವಾಹನ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಮೂರ್ಛೆ ಕಾಣಿಸಿಕೊಂಡಿದೆ. ಇದರಿಂದ ಟಿಟಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ದಿಬ್ಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಟಿಟಿ ವಾಹನದಲ್ಲಿದ್ದ 10 ಮಂದಿ ಪ್ರವಾಸಿಗರಲ್ಲಿ ನಾಲ್ವರಿಗೆ ಪೆಟ್ಟಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಬಾಬು, ಸುಚಿತ್ರಾ, ಡಿಂಪಾ, ಸಂಚಿತ, ಗುತ್ಯಮ್ಮ ಎಂದು ಗುರುತಿಸಲಾಗಿದೆ. ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.