ಮುಂಬೈ : ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾಗೂ ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್ ರಾಹುಲ್ ಹಾಗೂ ಆತಿಯಾ ಶೆಟ್ಟಿ ಸದ್ಯದಲ್ಲೇ ಜೋಡಿಯಾಗಲಿದ್ದಾರೆ. ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ಈ ಜೋಡಿಯ ಸುದ್ದಿ ಸದ್ಯ ಖಾಸಗಿಯಾಗಿಯೇನು ಉಳಿದಿಲ್ಲ. ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಹಲವು ಅನುಮಾನಗಳಿಗೆ ತೆರೆ ಎಳೆದಿದೆ. ಇತ್ತೀಚೆಗಿನ ವರದಿಗಳ ಪ್ರಕಾರ ಈ ತಾರಾ ಜೋಡಿಯು ಈ ವರ್ಷಾಂತ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇದೆಲ್ಲದರ ನಡುವೆ ಆತಿಯಾ ಶೆಟ್ಟಿಯವರ ತಂದೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಇದೀಗ ಈ ವಿವಾಹಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಆತಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗಾಳಿಸುದ್ದಿಯು ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಕ್ರಿಕೆಟಿಗ ರಾಹುಲ್ ಜತೆ ಆತಿಯಾ ಕಾಲ ಕಳೆದದ್ದು ಹೆಚ್ಚು ಸುದ್ದಿಯಾಗಿತ್ತು. ಇದಾದ ಬಳಿಕ ಆತಿಯಾ ಶೆಟ್ಟಿ ಸಹೋದರ ಆಹಾನ್ ಶೆಟ್ಟಿ ಚೊಚ್ಚಲ ಅಭಿನಯದ ಚಿತ್ರ ‘ತಡಪ್’ ಪ್ರೀಮಿಯರ್ ಶೋನಲ್ಲಿ ಆತಿಯಾ ಶೆಟ್ಟಿ ಹಾಗೂ ರಾಹುಲ್ ಮೊದಲ ಬಾರಿಗೆ ಒಟ್ಟಾಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಪಿಂಕ್‌ವಿಲ್ಲಾ ವರದಿಯ ಪ್ರಕಾರ ಈ ಜೋಡಿಯು ಈ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಎನ್ನಲಾಗಿದೆ.