ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅವಧಿಗೆ ಮೇಯರ್ ಉಪ ಮೇಯರ್ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅಧಿಕಾರದ ಗದ್ದುಗೆ ಏರಲು ಬಿಜೆಪಿಯಲ್ಲಿ ಮೇಯರ್ ಸ್ಥಾನದ ನಡುವೆ ಉಪಮೇಯರ್ ಸ್ಥಾನಕ್ಕೆ ಸಹ ಭಾರೀ ಆಕಾಂಕ್ಷಿಗಳ ಪಟ್ಟಿ ಬೆಳೆತಾ ಇದೆ. ಕಳೆದ ಎರಡು ಅವಧಿಯಲ್ಲಿ ಎರಡು ಬಾರಿ ಮಾತ್ರ ಮೇಯರ್ ಸ್ಥಾನ ದೊರಕಿರುವ ಹಿನ್ನೆಲೆಯಲ್ಲಿ ಈ ಬಾರಿ ಧಾರವಾಡಕ್ಕೆ ನೀಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉಪಮೇಯರ್ ಪಟ್ಟ ಹುಬ್ಬಳ್ಳಿಗೆ ನಿಶ್ಚಿತ ಎನ್ನಲಾಗುತ್ತದೆ.
ಈ ಬಾರಿಗೆ ಪಾಲಿಕೆಗೆ ಭಾರತೀಯ ಜನತಾ ಪಕ್ಷದಿಂದ ಮಹಿಳೆಯರ ಪೈಕಿ ಮಾಜಿ ಮೇಯರ್ ರಾಧಾಬಾಯಿ ಸಫಾರೆ ಬಿಟ್ಟರೆ ಎಲ್ಲರೂ ಹೊಸಬರಾಗಿದ್ದಾರೆ. ರಾಧಾಭಾಯಿ ಸಫಾರೆ ಮೇಯರ್ ಪಟ್ಟ ಅಲಂಕರಿಸಿದ್ದು ಈಗ ಉಪಮೇಯರ್ ಪಟ್ಟಕ್ಕೇರುವ ಸಾಧ್ಯತೆ ಕಡಿಮೆ. ಒಟ್ಟಿನಲ್ಲಿ ಮೊದಲ ಬಾರಿ ಆಯ್ಕೆಯಾದವರ ಮಧ್ಯೆಯೇ ತುರುಸಿನ ಜಿದ್ದಾಜಿದ್ದಿ ಏರ್ಪಡುವ ಲಕ್ಷಣಗಳು ಇವೆ.
ಉಪ ಮೇಯರ್ ಸ್ಥಾನ ಮಹಿಳೆಯರಿಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಆಯ್ಕೆಯಾದವರಿಗೆ ಮೊದಲ ಆದ್ಯತೆಯಾಗಿರುವ ಹಿನ್ನೆಲೆಯಲ್ಲಿ 47ನೇ ವಾರ್ಡ್ ದಿಂದ ಆಯ್ಕೆಯಾದ ರೂಪಾ ಶೆಟ್ಟಿ , 57 ವಾರ್ಡ್ ದಿಂದ ಗೆಲುವು ಸಾಧಿಸಿರುವ ಹಾಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಸದಸ್ಯೆಯೂ ಆಗಿರುವ ಮೀನಾಕ್ಷಿ ವಂಟಮೂರಿ, ವಾರ್ಡ್ ೬೪ರ ರಾಜ್ಯ ಓಬಿಸಿ ಮುಖಂಡ ಸತೀಶ ಶೇಜವಾಡ್ಕರ್ ಪತ್ನಿ ಪೂಜಾ ಶೇಜವಾಡಕರ, ಇವರುಗಳಲ್ಲದೇ ಒಬಿಸಿ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ಮುಖಂಡ ಸಿದ್ದು ಮೊಗಲಿಶೆಟ್ಟರ್ ಪತ್ನಿ ಸೀಮಾ ಮೊಗಲಿಶೆಟ್ಟರ್ ಅವರ ಹೆಸರು ಪರಿಗಣನೆಗೆ ಬರುವ ಸಾಧ್ಯತೆಗಳಿವೆ. ಇನ್ನು ಸರಸ್ವತಿ ಧೋಂಗಡಿ(54) ಪ್ರೀತಿ ಖೋಡೆ (66), ವೀಣಾ ಭರದ್ವಾಡ ( 49), ಸುಮಿತ್ರಾ ಗುಂಜಾಳ (72) ಶೀಲಾ ಕಾಟಕರ(73) ಇವರು ಸಹ ಆಯ್ಕೆಯಾದ ಇತರ ಸದಸ್ಯರಾಗಿದ್ದಾರೆ. ಆದರೆ ಇವರ ಹೆಸರು ಅಷ್ಟೊಂದು ಕೇಳಿ ಬರುತಿಲ್ಲ.
ಮೇಯರ್ ಲೆಕ್ಕಾಚಾರ ತಲೆಕೆಳಗಾಗಿ ಹುಬ್ಬಳ್ಳಿಗೆ ದೊರೆತಲ್ಲಿ ಧಾರವಾಡಕ್ಕೆ ಒಲಿಯುವುದು ಗ್ಯಾರಂಟಿಯಾಗಿದ್ದು ಧಾರವಾಡದ ಜ್ಯೋತಿ ಪಾಟೀಲ ವಾರ್ಡ್ ,19 ಹಾಗೂ ವಾರ್ಡ್ 1 ರ ಅನಿತಾ ಚಳಗೇರಿ ಹೆಸರುಗಳು ಮುಂಚೂಣಿವೆ. ರತ್ನಾ ನಾಝರೆ ಹಾಗೂ ನೀಲಮ್ಮ ಅರವಾಳದ ಅವರೂ ಆಯ್ಕೆಯಾದ ಇತರ ಬಿಜೆಪಿ ಸದಸ್ಯರಾಗಿದ್ದಾರೆ.
ಕಳೆದ ಮೂರು ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರಿಗಳ ವಶದಲ್ಲಿ ಆಡಳಿತವಿದ್ದು ಹತೋಟಿಗೆ ತೆಗೆದುಕೊಳ್ಳಲು, ಮುಂದಿನ ವಿಧಾನಸಭಾ ಚುನಾವಣೆ ಲಕ್ಷ್ಯದಲ್ಲಿಟ್ಟುಕೊಂಡು ಹಿರಿಯರಿಗೆ ಹಾಗೂ ಕ್ರಿಯಾಶೀಲರಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ ಉಪಮೇಯರ್ ಸ್ಥಾನಕ್ಕೆ ನೆಪ ಮಾತ್ರಕ್ಕೆ ಕಣಕ್ಕಿಳಿಯ ಇಳಿಸುತ್ತಾರೆ ಎನ್ನುವುದು ಬಹುತೇಕ ಖಚಿತವಾಗಿದೆ.
ಇನ್ನು ಸಾಕಷ್ಟು ಮೇಯರ್ ಹಾಗೂ ಉಪಮೇಯರ್ ಹುದ್ದೆಯ ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರ ಮುಖಾಂತರ ಲಾಭಿ ಮಾಡುತಿದ್ದು, ಮೇ 28ಕ್ಕೆ ನಡೆಯುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಸಭೆ ಮೇ 26 ಅಥವಾ 27ಕ್ಕೆ ನಡೆಸುವ ಸಾಧ್ಯತೆ ಇದೆ. ಅಲ್ಲಿ ಬಹುತೇಕ ಯಾರು ಮೇಯರ್ ಹಾಗೂ ಉಪಮೇಯರ್ ಎಂಬುದು ಫೈನಲ್ ಆಗುತ್ತದೆ
.