ಹಾವೇರಿ : ಮದುವೆ ಸಂಭ್ರಮದಲ್ಲಿದ್ದ ವಧು ಹಾಗೂ ವರ ಕುಟುಂಬಕ್ಕೆ ಭಾರಿ ಬರ ಸಿಡಿಲು ಬಡಿದಿದೆ. ಇದರಿಂದಾಗಿ ಸಂತೋಷದಲ್ಲಿ ಜಿಗಿದು ಕುಣಿದಾಡುತ್ತಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಇನ್ನೂ, ನಮ್ಮ ಮಗಳ ಮದುವೆ ಸರಾಗವಾಗಿ ಆಯ್ತು ಅಂತ ಸಂತೋಷದಿಂದ ತಮ್ಮ ಊರಿನತ್ತ ಮುಖ ಮಾಡಿದ್ದ ವಧುವಿನ ಕುಟುಂಬಕ್ಕೆ ಈಗ ಆಗಿರುವ ಅನಾಹುತದಿಂದ ಪರಿತಪಿಸುವಂತಾಗಿದೆ. ಮದುವೆಯಾಗಿ ಕೇವಲ 10 ಗಂಟೆಯಲ್ಲಿ ನಮ್ಮ ಮಗಳು ವಿಧವೆ ಆದಳು ಅಂತ ಕಣ್ಣೀರು ಇಡುತ್ತಿದ್ದಾರೆ.
ಹೌದು, ಮದುವೆಯಾದ 10 ಗಂಟೆಯಲ್ಲಿಯೇ ವರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ. ಶ್ಯಾಡಂಬಿ ಗ್ರಾಮದ ಶಿವಾನಂದ ಶೇಖಪ್ಪ ಸುಣಗಾರ (34) ಮೃತ ವರ. ಶಿವಾನಂದ ಡಿಇಡಿ ಪದವೀಧರರಾಗಿದ್ದು, ಮಂಗಳವಾರ ಮಧ್ಯಾಹ್ನ 12:29ಕ್ಕೆ ಮತ್ತಿಗಟ್ಟಿ ಯಲ್ಲಪ್ಪ ಬಾರಕೇರಿ ಎಂಬುವವರ ಪುತ್ರಿ ಜ್ಯೋತಿ ಜೊತೆ ಸಪ್ತಪದಿ ತುಳಿದಿದ್ದರು. ಸಡಗರ ಸಂಭ್ರಮದಿಂದ ವಿವಾಹ ಕಾರ್ಯಕ್ರಮ ನೆರವೇರಿತ್ತು.
ರಾತ್ರಿ ಊಟ ಮಾಡಿದ ನಂತರ ಶಿವಾನಂದಗೆ ವಾಂತಿಯಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ರಾತ್ರಿ 10 ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿವಾನಂದ ಸಾವಿನಿಂದ ಎರಡು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.