ಬೆಂಗಳೂರು : ಪಿಎಸ್ಐ ಅಕ್ರಮ ಬಗೆದಷ್ಟು ಹೆಚ್ಚಾಗುತ್ತಿದೆ. ಅದರಲ್ಲೂ ರಾಜ್ಯದ ಹಿರಿಯ ರಾಜಕೀಯ ನಾಯಕರ ಸುತ್ತ ಅದು ಗಿರಕಿ ಹೊಡೆಯುತ್ತಿದೆ. ಈಗ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಿದ್ದ ರಾಜಕಾರಣಿಗಳ ರಕ್ಷಣಾ ದಳದ ಎರಡನೇ ವಿಕೆಟ್ ಸಿಐಡಿ ಬಲೆಗೆ ಬಿದ್ದಿದೆ.
ಹೌದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭದ್ರತೆಗೆ ನಿಯೋಜಿತನಾಗಿದ್ದ ಹೆಡ್ ಕಾನ್‌ಸ್ಟೇಬಲ್, ಈಗ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣದಲ್ಲಿ ರಾಜ್ಯ ಅಪರಾಧ ತನಿಖಾ ದಳ (CID) ಬಲೆಗೆ ಬಿದ್ದಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ಯಶವಂತ್ ದೀಪು ಬಂಧಿತನಾಗಿದ್ದು, ಇನ್ ಸರ್ವೀಸ್ ಕೋಟಾದಡಿ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಬಯಸಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದಿದ್ದ. ತನ್ನ ಕನಸು ಈಡೇರಿಕೆಗೆ ಅಡ್ಡದಾರಿ ತುಳಿದ ಯಶವಂತ್, ಒಎಂಆರ್ ಶೀಟ್ ತಿದ್ದಿ ಪಿಎಸ್‌ಐ ಹುದ್ದೆಗೆ ಆಯ್ಕೆಯಾದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ.