ಹುಬ್ಬಳ್ಳಿ: ‘ಹಿರಿಯ ನಾಗರಿಕರ ಸಮಸ್ಯೆಗಳಿಗೆ ದನಿಯಾಗಿ ಕೆಲಸ ಮಾಡುತ್ತಿರುವ ಸಂಘದ ಬೇಡಿಕೆಗಳನ್ನು ಈಡೇರಿಸಲು ಬದ್ಧನಾಗಿದ್ದೇನೆ. ಅದಕ್ಕಾ ಸರ್ಕಾರದ ಮಟ್ಟದಲ್ಲಿ ಚರ್ಚಿಸುವೆ. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ, ನಮ್ಮ ದೇಶದಲ್ಲಿ ಹಿರಿಯರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ ಇದಕ್ಕೆ ಈ ದೇಶದ ಸಂಸ್ಕೃತಿ ಮತ್ತು ಧಾರ್ಮಿಕತೆ ಕಾರಣ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದ ಬೆಂಗೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಬೆಂಗೇರಿಯಲ್ಲಿ ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಡಿ ಈಗಾಗಲೇ ₹10 ಲಕ್ಷ ಕೊಟ್ಟಿದ್ದೇನೆ’ ಎಂದರು.
ಸಂಸ್ಕಾರ ವಿದ್ಯಾಸಂಸ್ಥೆ ಅಧ್ಯಕ್ಷ ಮಹೇಂದ್ರ ಸಿಂಘಿ ಮಾತನಾಡಿ, ‘ರೈಲ್ವೆಯಲ್ಲಿ ಹಿರಿಯ ನಾಗರಿಕರ ಟಿಕೆಟ್ ಖರೀದಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ. ಅದನ್ನು ಮತ್ತೆ ಆರಂಭಿಸುವ ಸಲುವಾಗಿ ಸಂಘದ ಸದಸ್ಯರೊಂದಿಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಭೇಟಿ ಮಾಡಿ, ಒತ್ತಾಯಿಸಲಾಗುವುದು. ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ₹51 ಸಾವಿರ ದೇಣಿಗೆ ನೀಡುವೆ’ ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ, ‘ರಾಜ್ಯದಲ್ಲಿ 70 ಲಕ್ಷ ಹಿರಿಯ ನಾಗರಿಕರಿದ್ದು, ಅವರ ಕಾಳಜಿ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಹಿರಿಯರ ಪರವಾಗಿರುವ ಕಾಯ್ದೆ ಹಾಗೂ ನಿಯಮಗಳನ್ನು ಎಲ್ಲಾ ಇಲಾಖೆಗಳಲ್ಲೂ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬದ್ಧತೆಯನ್ನು ಸರ್ಕಾರ ತೋರಬೇಕು’ ಎಂದು ಒತ್ತಾಯಿಸಿದರು.
‘ಬೆಂಗೇರಿಯಲ್ಲಿ ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ₹3 ಕೋಟಿ ಮೊತ್ತದ ಪ್ರಸ್ತಾವ ಸಿದ್ಧವಾಗಿದೆ. ಅದಕ್ಕೆ ಈಗಾಗಲೇ ಸುಮಾರು ₹8 ಲಕ್ಷ ದೇಣಿಗೆ ಸಂಗ್ರಹವಾಗಿದೆ. ನಿವೃತ್ತ ನೌಕರರು ಸೇರಿದಂತೆ ಹಲವು ಮಂದಿ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ಸದ್ಯದಲ್ಲೇ ಭವನದ ಕಾಮಗಾರಿ ಆರಂಭವಾಗಲಿದೆ. ಗದುಗಿನಲ್ಲಿ ರಾಜ್ಯದ ಮೊದಲ ಹಿರಿಯ ನಾಗರಿಕರ ಭವನ ಈಗಾಗಲೇ ನಿರ್ಮಾಣವಾಗಿದೆ. ಸಂಘವು ರಾಜ್ಯದಾದ್ಯಂತ ಆರು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ’ ಎಂದರು.
ಸಂಘದ ಎಂ.ಪಿ. ಕುಂಬಾರ ವರದಿ ವಾಚಿಸಿದರು. ಸಾಬೂನು ಮತ್ತು ಮಾರ್ಜಕ ಮಂಡಳಿ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಮಾಜಿ ಸದಸ್ಯ ಹೂವಪ್ಪ ದಾಯಗೋಡಿ, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಪಿ. ಗಾಯಕವಾಡ, ಉಪಾಧ್ಯಕ್ಷರಾದ ಡಾ.ಎ.ಬಿ. ಖೋತ, ಎಫ್.ಎ. ಶೇಖ, ಎಸ್.ಎಸ್. ಭಟ್, ಬಸವರಾಜ ಮುನೋಳ್ಳಿ, ಎನ್. ಗಂಗಾಧರ, ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ಬೆನ್ನೂರ, ಉಪ ಕಾರ್ಯದರ್ಶಿ ಎ.ಎಫ್. ರೇಶ್ಮಿ ಇದ್ದರು.
*ಸಂಘದ ವಿವಿಧ ಬೇಡಿಕೆಗಳು*
* ಹಿರಿಯ ನಾಗರಿಕರಿಗಾಗಿ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರತ್ಯೇಕ ವಿಭಾಗ ಆರಂಭಿಸಬೇಕು. ಪೊಲೀಸ್ ಠಾಣೆಗಳಲ್ಲಿ ಹಿರಿಯ ನಾಗರಿಕರ ಸಲಹಾ ಸಮಿತಿ ರಚಿಸಬೇಕು.
* ಜಿಲ್ಲಾ ಕೇಂದ್ರ ಹಾಗೂ ಮಹಾನಗರಗಳಲ್ಲಿ ಹಿರಿಯ ನಾಗರಿಕರ ಭವನ ನಿರ್ಮಾಣಕ್ಕೆ ಬಜೆಟ್‌ನಲ್ಲಿ ನಿವೇಶನ ಒದಗಿಸಿ, ಹಣ ಮೀಸಲಿಡಬೇಕು. ವೃದ್ಧಾಪ್ಯವೇತನ ಮಂಜೂರು ಮಾಡಲು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು.
* ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಇಲಾಖೆ ಸ್ಥಾಪನೆ, ಜಿಲ್ಲಾ ಮತ್ತು ರಾಜ್ಯಮಟ್ಟದ ಹಿರಿಯ ನಾಗರಿಕರ ಸಮಿತಿ ಸಭೆಯನ್ನು 3 ತಿಂಗಳಿಗೊಮ್ಮೆ ನಡೆಸುವುದು.
* ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ನೀಡುವ ಮಾಸಿಕ ₹1000 ವೈದ್ಯಕೀಯ ಭತ್ಯೆಯನ್ನು ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೂ ನೀಡಬೇಕು, ನಿವೃತ್ತ ನೌಕರ ದಂಪತಿಗೆ ಆರೋಗ್ಯ ಸಂಜೀವಿನ ಸುರಕ್ಷಾ ಯೋಜನೆ ಜಾರಿ ಮಾಡಬೇಕು.
* ನೌಕರರ ನಿವೃತ್ತಿ ಹಣಕ್ಕೆ ವಿಧಿಸಿರುವ ಆದಾಯ ತೆರಿಗೆ ರದ್ಧುಗೊಳಿಸಬೇಕು, ನಿವೃತ್ತ ಖಾಸಗಿ ನೌಕರರಿಗೆ ₹1 ಸಾವಿರ ಇರುವ ಇಪಿಎಫ್ ಮೊತ್ತವನ್ನು ಮಾಸಿಕ ಕನಿಷ್ಠ ₹5 ಸಾವಿರ ನಿಗದಿ ಮಾಡಬೇಕು