ಬಾಗಲಕೋಟೆ : ಕನ್ನಡದ ಕೋಟ್ಯಾಧಿಪತಿ ಖ್ಯಾತಿಯ ಬೀಳಗಿ ಹೆಸ್ಕಾಂ ಲೈನ್ಮನ್ ತಿಮ್ಮಣ್ಣ ಭೀಮಪ್ಪ ಗುರಡ್ಡಿ ಸಾವನ್ನಪ್ಪಿದ್ದಾರೆ. ನೂತನ ಮನೆಯ ಗೃಹಪ್ರವೇಶಕ್ಕೆ ಎರಡು ದಿನವಿರುವಾಗಲೇ ಅವರ ಅನುಮಾನಾಸ್ಪದ ಸಾವು ಆಘಾತಕ್ಕೆ ಕಾರಣವಾಗಿದೆ.
ಟಿಕ್ಟಾಕ್, ಹಾಸ್ಯ, ಸಂಗೀತದ ಮೂಲಕ ಕನ್ನಡಿಗರನ್ನು ರಂಜಿಸುತ್ತಿದ್ದ ತಿಮ್ಮಣ್ಣ ನಟ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿ 6.40 ಲಕ್ಷ ರೂ. ಗೆದ್ದಿದ್ದರು. ಏಪ್ರಿಲ್ 5ರ ಗುರುವಾರದಂದು ಅವರ ನೂತನ ಮನೆಯ ಗೃಹಪ್ರವೇಶ ನಡೆಯುವುದರಲ್ಲಿತ್ತು. ಆದರೆ ಗೃಹ ಪ್ರವೇಶಕ್ಕೂ ಮೊದಲು ಅವರು ಶವವಾಗಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದಲ್ಲಿ ಸೋಮವಾರ ರಾತ್ರಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಂದೆಯ ಅನಾರೋಗ್ಯ ಹಾಗೂ ಮನೆ ನಿರ್ಮಾಣಕ್ಕೆ ಮಾಡಿದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಮುಂದಿನ ತಿಂಗಳಿನಲ್ಲಿ ಅವರಿಗೆ ಮದುವೆ ನಿಶ್ಚಯವಾಗುವುದರಲ್ಲಿತ್ತು.
ಓದಿದ್ದು ಎಸೆಸ್ಸೆಲ್ಸಿಯಾದರೂ ತಿಮ್ಮಣ್ಣ ಜ್ಞಾನದಲ್ಲಿ ಎಲ್ಲರನ್ನು ಮೀರಿಸುವಂತಿದ್ದರು. ಖೋಖೋ ಪಟುವಾಗಿ ಊರಿನ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಹಾಸ್ಯ, ಸಂಗೀತ, ಟಿಕ್‌ಟಾಕ್‌ನಲ್ಲಿ ಕನ್ನಡಿಗರ ಮನೆಮಾತಾಗಿದ್ದರು. ಇಂತಹ ಅದ್ಭುತ ಪ್ರತಿಭೆ ಪ್ರಸ್ತುತ ದುರಂತ ಅಂತ್ಯ ಕಂಡಿರುವುದು ಮನೆಮಂದಿಯನ್ನು ದುಃಖದಲ್ಲಿ ಮುಳುಗಿಸಿದೆ.