ಹುಬ್ಬಳ್ಳಿ : ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಯಡಿಯೂರಪ್ಪನವರ ಆಪ್ತ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಈ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.
ಬಿಜೆಪಿ ರಾಷ್ಟ್ರದಲ್ಲಿಯೇ ದೊಡ್ಡ ಪಕ್ಷ, ಈ ಪಕ್ಷಕ್ಕೆ ಇಬ್ಬರೇ ನಾಯಕರಲ್ಲ. ಇವರಿಬ್ಬರಿಂದಲೇ ನಮ್ಮ ಬಿಜೆಪಿ ಪಕ್ಷವಲ್ಲ, ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾರಂತ ಸಾಕಷ್ಟು ಜನರಿದ್ದಾರೆ. ಯಾರೋ ಈ ಇಬ್ಬರು ವ್ಯಕ್ತಿಗಳು ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆಂದರೆ, ನಾವು ತಕ್ಷಣ ಬೇರೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಮೋಹನ್ ಲಿಂಬಿಕಾಯಿ ವಾಗ್ದಾಳಿ ನಡೆಸಿದ್ದಾರೆ.ಹೊರಟ್ಟಿ ಬಿಜೆಪಿ ಸೇರ್ಪಡೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ..ಹೊರಟ್ಟಿಯವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಒಪ್ಪೋಣ. ಆದರೆ, ಟಿಕೆಟ್ ನೀಡುವಾಗ ವಿಚಾರ ಮಾಡಿ ನೋಡಿ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥರಿದ್ದಾರೆ, ನಾನು ಬೇಡ ಅಂದ್ರೆ ಬಿಡಿ, ಸಮರ್ಥವಾಗಿದ್ದವರಿಗೆ ಟಿಕೆಟ್ ನೀಡಿ. ಪಕ್ಷ ಬೆಳೆಯಬೇಕೆಂದರೆ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡಿ.
ಅದು ಬಿಟ್ಟು ಹೊರಟ್ಟಿಯವರಿಗೆ ಟಿಕೆಟ್ ನೀಡಿದ್ರೆ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ಹೋಗುತ್ತದೆ, ಅದು ಆಗಬಾರದು. ಯಾವುದೇ ಕಾರಣಕ್ಕೂ ಬಸವರಾಜ ಹೊರಟ್ಟಿಯವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಬೇಡಿ ಎಂದು ಅಸಮಾಧಾನ ಹೊರ ಹಾಕಿದರು. ಬಸವರಾಜ ಹೊರಟ್ಟಿಯವರಿಗೆ ಬಹಳಷ್ಟು ಶಿಕ್ಷಕರ ವಿರೋಧವಿತ್ತು.ಇದರಿಂದ ಬಸವರಾಜ ಹೊರಟ್ಟಿಯವರಿಗೆ ಸೋಲಿನ ಭಯವಿತ್ತು. ನಮ್ಮದು ರಾಷ್ಟ್ರೀಯ ಪಕ್ಷ, ದೊಡ್ಡ ಮಟ್ಟದಲ್ಲಿ ಸದಸ್ಯರನ್ನ ಹೊಂದಿರುವ ಪಕ್ಷ. ನಾನು ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೆ. ಆದ್ರೆ, ಈಗ ಯಾಕೆ ಹೀಗೆ ಮಾಡಿದ್ರು ಎಂಬುದು ಮಾತ್ರ ನನಗೆ ಗೊತ್ತಿಲ್ಲ. ನಾನು ಎರಡ್ಮೂರು ತಿಂಗಳಿನಿಂದ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ.
ಈಗ ಹೊರಟ್ಟಿಯವರನ್ನು ಪಕ್ಷಕ್ಕೆ ಕರೆದುಕೊಂಡು ಬಂದಿದ್ದು ನನಗೆ ಬೇಸರ ತಂದಿದೆ. ನಾನು ಮುಂದೆ ಏನು ಮಾಡಬೇಕು ಎಂಬುದನ್ನು ನಮ್ಮ ಕಾರ್ಯಕರ್ತರ ಜೊತೆಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನನ್ನ ಹೆಸರನ್ನು ಜಗದೀಶ್ ಶೆಟ್ಟರ್ ಅವರೇ ಪ್ರಸ್ತಾಪ ಮಾಡಿದ್ದರು.ಮೋಹನ್ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಿದ್ರೆ ಗೆಲ್ಲುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಈಗ ಅವರೇ ಹೊರಟ್ಟಿಯವರನ್ನು ಪಕ್ಷಕ್ಕೆ ಸೇರಿಸಲು ಮುಂದಾಳತ್ವ ವಹಿಸಿಕೊಳ್ಳುವುದನ್ನ ನೋಡಿದ್ರೆ ನಗಗೆ ವಿಪರ್ಯಾಸ ಎನ್ನಿಸುತ್ತದೆ. ಕಾಯ್ದು ನೋಡೊಣ, ಇದಕ್ಕೆ ಎಲ್ಲವೂ ಕಾಲವೇ ನಿರ್ಧಾರ ಮಾಡುತ್ತೆ, ನಾನು ಸಮರ್ಥ ಅಭ್ಯರ್ಥಿ ಆಗದೆ ಇದ್ದರೆ, ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ. ಅದನ್ನ ಬಿಟ್ಟು ಪಕ್ಷದ ಹೊರಗಿನವರನ್ನ ತಂದು ಚುನಾವಣೆ ಮಾಡೋದು ಬೇಡ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರ ಆಪ್ತರನ್ನು ಕಡೆಗಣನೆ ಮಾಡುತ್ತಿಲ್ಲ. ನಾನೂ ಈ ಕುರಿತು ಯಡಿಯೂರಪ್ಪನವರನ್ನ ಭೇಟಿ ಆಗುತ್ತೇನೆ. ಚರ್ಚೆ ಮಾಡುತ್ತೇನೆ. ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿಯವರನ್ನು ಸಹ ಭೇಟಿ ಮಾಡುತ್ತೇನೆ. ಈ ಎಲ್ಲಾ ವಿಷಯದ ಬಗ್ಗೆ ಪಕ್ಷದ ಹಿರಿಯರಲ್ಲಿ ಚರ್ಚಿಸುವುದಾಗಿ ಇದೇ ವೇಳೆ ಹೇಳಿದ್ದಾರೆ
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …