ಬಾಗಲಕೋಟೆ : ಹುಟ್ಟುತ್ತ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿಗೆ ಈ ಘಟನೆ ಸಾಕ್ಷಿ ಎಂಬಂತಿದೆ. ಹೌದು ಆಸ್ತಿ ವಿಚಾರಕ್ಕಾಗಿ ಸಹೋದರರಿಬ್ಬರು ಸಹೋದರಿಯ ಮೇಲೆ ಮಚ್ಚಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಅಮೀನಗಢ ಪಟ್ಟಣದಲ್ಲಿ ನಡೆದಿದೆ. ಕವಿತಾ ಹಿರೇಮಠ ಎಂಬುವವರ ಕುತ್ತಿಗೆಗೆ ಸಹೋದರರಾದ ಚಂದ್ರಶೇಖರ್ ಹಾಗೂ ಕುಮಾರಸ್ವಾಮಿ ಹಿರೇಮಠ ಎಂಬುವವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕವಿತಾ ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನು
ಕುಮಾರಸ್ವಾಮಿ ಹಿರೆಮಠ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಈ ಕುಟುಂಬಕ್ಕೆ ಸಂಬಂಧಿಸಿದ೨೨ ಎಕರೆ ಜಮೀನಿದೆ.ಆಸ್ತಿ ಪಾಲು ವಿಚಾರದಲ್ಲಿ ವಿವಾದ ಇತ್ತಲ್ಲದೇ, ಕವಿತಾ ಹಿರೆಮಠ ಹೆಸರಲ್ಲಿ ಅವ್ರ ತಾಯಿ ನಾಲ್ಕು ಎಕರೆ ಆಸ್ತಿ ಬರೆದಿದ್ದರಿಂದ ಮನಸ್ತಾಪ ಶುರುವಾಗಿ ಘಟನೆಗೆ ಕಾರಣ ಎನ್ನಲಾಗಿದೆ. ಸದ್ಯ ಈ ವಿವಾದ ಹುನಗುಂದ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಆದಾಗ್ಯೂ ಇವತ್ತು ಚಂದ್ರಶೇಖರ್ ಹಾಗೂ ಕುಮಾರಸ್ವಾಮಿ ಇಬ್ಬರು ಸೇರಿ ಸಹೋದರಿ ಕವಿತಾ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಸಂಬಂಧಿಸಿದಂತೆ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
