ಬೆಂಗಳೂರು: ಸ್ವಯಂ ಘೋಷಣೆ ಆಧಾರಿತ ಭೂ ಪರಿವರ್ತನೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎರಡು ಮೂರು ದಿನಗಳಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವ ತಿದ್ದುಪಡಿಗೆ ಸರ್ಕಾರ ಮುಂದಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಮತ್ತೆ ವಿವಾದಾತ್ಮಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಸ್ವಯಂ ಘೋಷಣೆ ಆಧಾರಿತ ಭೂ ಪರಿವರ್ತನೆಗೆ ಅನುಮತಿ ನೀಡುವ ನಿಟ್ಟಿನಲ್ಲಿ ತಿದ್ದುಪಡಿ ತರಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಪರಿಚ್ಛೇದ 95 ರಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ.ಮುಂದಿನ ಮುಂಗಾರು ಅಧಿವೇಶನದಲ್ಲಿ ಈ ಸಂಬಂಧ ವಿಧೇಯಕ ತರಲು ಚಿಂತನೆ ನಡೆಸಿದೆ. ಈ ತಿದ್ದುಪಡಿ ಪ್ರಕಾರ ಯಾವುದೇ ಬಳಕೆಗಾಗಿ ಸ್ವಯಂ ಘೋಷಣೆಯನ್ನು ನೀಡುವ ಮೂಲಕ ಕೃಷಿ ಭೂಮಿಯ ಮಾಲೀಕರು ತಮ್ಮ ಭೂಮಿಯನ್ನು ಕೃಷಿಯೇತರ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಪ್ರಸಕ್ತ ಭೂ ಪರಿವರ್ತನೆ ಪ್ರಕ್ರಿಯೆ ಹೇಗೆ?: ಈಗಿರುವ ಪ್ರಕ್ರಿಯೆ ಕ್ಲಿಷ್ಟಕರ ಹಾಗೂ ವಿಳಂಬವಾಗಿದ್ದು, ಭೂ ಪರಿವರ್ತನೆಗೆ ಏಳು ಎಂಟು ತಿಂಗಳು ತಗುಲುತ್ತಿದೆ. ಅದಕ್ಕಾಗಿಯೇ ತಿದ್ದುಪಡಿಯನ್ನು ತಂದು ಸರಳೀಕರಣ ಮಾಡಲು ಸರ್ಕಾರ ಮುಂದಾಗಿದೆ. ಈಗಿರುವ ನಿಯಮದಂತೆ ಭೂ ಪರಿವರ್ತನೆಯ ಅರ್ಜಿಯನ್ನು ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳ ಮೂಲಕ ಯೋಜನಾ ಪ್ರಾಧಿಕಾರಕ್ಕೆ ರವಾನಿಸುತ್ತದೆ. ಅಲ್ಲಿಂದ ಎಲ್ಲಾ ಭೂಸ್ವಾಧೀನ ಅಧಿಕಾರಿಗಳು, ತಹಶೀಲ್ದಾರ್, ರೆವಿನ್ಯೂ ಇನ್‌ಸ್ಪೆಕ್ಟರ್ ಮೂಲಕ ಕೊನೆಯದಾಗಿ ಗ್ರಾಮ ಲೆಕ್ಕಾಧಿಕಾರಿಗೆ ಅರ್ಜಿ ತಲುಪುತ್ತದೆ.ಪರಿವರ್ತನೆ ಅನುಮತಿಗಾಗಿ ಅರ್ಜಿ ನಮೂನೆಯನ್ನು ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿ ಗೆ ಸಲ್ಲಿಸಬೇಕಾಗಿದೆ. ಅರ್ಜಿಯನ್ನು ಸ್ವೀಕರಿಸಿದ ನಂತರ, ಸೂಕ್ತ ಅಧಿಕಾರಿಗಳು ಆಸ್ತಿಯ ಶೀರ್ಷಿಕೆ, ಯಾವುದೇ ಹೊರೆಗಳು ಮತ್ತು ಮುಂತಾದವುಗಳನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಪರಿಶೀಲನೆಯ ನಂತರ, ತಹಶೀಲ್ದಾರ್ ಅಥವಾ ಉಪವಿಭಾಗಾಧಿಕಾರಿ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವುದೇ ಆಕ್ಷೇಪಣೆಗಳಿಲ್ಲ ಮತ್ತು ಭೂಮಿ ಮಾಸ್ಟರ್ ಪ್ಲಾನ್‌ನ ಗಡಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಅರ್ಜಿದಾರರಿಗೆ ಭೂ ಬಳಕೆಯ ಬದಲಾವಣೆ ಅನುಮೋದನೆಯನ್ನು ನೀಡಲಾಗುತ್ತದೆ. ಅನುಮೋದನೆಯ ನಂತರ 30 ದಿನಗಳಲ್ಲಿ, ತಹಶೀಲ್ದಾರ್ ಭೂ ಪರಿವರ್ತನೆಯ ಮಾಹಿತಿಯನ್ನು ನವೀಕರಿಸುತ್ತಾರೆ. ಈ ವಿವಿಧ ಹಂತಗಳಲ್ಲಿ ಅರ್ಜಿ ವಿಲೇವಾರಿಗೆ ಏಳೆಂಟು ತಿಂಗಳು ವಿಳಂಬ ಆಗುತ್ತಿತ್ತು.
*ನಿಯಮಾವಳಿಗೇನು* ಹೊಸ ನಿಯಮದ ಪ್ರಕಾರ ಭೂ ಮಾಲೀಕ ಸ್ವಯಂ ಘೋಷಣೆಯೊಂದಿಗೆ ಭೂ ಪರಿವರ್ತನೆ ಮಾಡಬಹುದಾಗಿದೆ. ಸ್ವಯಂ ಘೋಷಣೆ ಕ್ರಮಬದ್ಧವಾಗಿದೆಯೋ ಎಂಬುದನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಕೇವಲ ಎರಡು ಮೂರು ದಿನಗಳಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಜನರು ತಮ್ಮ ಖಾಸಗಿ ಭೂಮಿಯನ್ನು ತಾವು ಉತ್ತಮವೆಂದು ಭಾವಿಸುವ ರೀತಿಯಲ್ಲಿ ಬಳಸಲು ಅಧಿಕಾರವಿದೆ. ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಕೃಷಿ ಭೂಮಿ ಬಳಕೆಯ ಬದಲಾವಣೆಯ ಮೇಲೆ ಕಂದಾಯ ಇಲಾಖೆಯ ಯಾವುದೇ ನಿಬಂಧನೆಗಳಿಲ್ಲ ಎಂದು ಇಲಾಖೆ ಅಧ್ಯಯನ ಮಾಡಿದೆ. ಸದ್ಯ ಸುಮಾರು ಇಪ್ಪತ್ತಕ್ಕೂ ಹೆಚ್ಚು ಭೂ ದಾಖಲೆಗಳನ್ನು ನೀಡಬೇಕು. ಹೊಸ ನಿಯಮದಲ್ಲಿ ಸೀಮಿತ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಿದರೆ ಸಾಕು, ಉಳಿದ ದಾಖಲೆಗಳನ್ನು ಅಧಿಕಾರಿಗಳು ಅನ್ ಲೈನ್ ಮೂಲಕ ಸಂಗ್ರಹಿಸಿ ತಪಾಸಣೆ ಮಾಡುತ್ತಾರೆ.
ಗ್ರ್ಯಾಂಟ್ ಜಮೀನು ಆಗಿದ್ದಲ್ಲಿ, ಹಸಿರು ವಲಯದಲ್ಲಿದ್ದರೆ, ಕರ್ನಾಟಕ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜಮೀನನ್ನು ಸ್ವಯಂ ಘೋಷಣೆ ಆಧಾರದಲ್ಲಿ ಭೂ ಪರಿವರ್ತನೆ ಮಾಡಲು ಅವಕಾಶ ಇಲ್ಲ. ತಪ್ಪು ಸ್ವಯಂ ಘೋಷಣೆ ಮಾಡಿದರೆ, ಜಿಲ್ಲಾಧಿಕಾರಿಗೆ ಇದನ್ನು ಅನೂರ್ಜಿತ ಮಾಡಲು ಅಧಿಕಾರವಿರುತ್ತದೆ. ಅರ್ಜಿದಾರ ಪಾವತಿಸಿದ ಭೂ ಪರಿವರ್ತನೆ ಶುಲ್ಕ ಜಪ್ತಿ ಮಾಡುವುದರ ಜೊತೆಗೆ ದಂಡನೆ ವಿಧಿಸುವ ನಿಯಮಗಳನ್ನೂ ರೂಪಿಸಲಾಗುತ್ತದೆ.
Check Also
*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ
Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …