ಮಂಡ್ಯ : ಕರ್ನಾಟಕ ವಿಧಾನ ಸಭಾ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಎಲ್ಲ ಪಕ್ಷಗಳ ಕಸರತ್ತು ಜೋರಾಗಿದೆ. ಈಗಾಗಲೇ ಟಿಕೆಟ್ ಹಂಚಿಕೆ ಕುರಿತು ಸಭೆ ಸಮಾರಂಭಗಳು ಜೋರಾಗಿ ನಡೆದಿವೆ.
ಇನ್ನೂ, ಇತ್ತ ಸಕ್ಕರೆ ನಾಡು ಮಂಡ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ. ಹೌದು, ರಾಜ್ಯದ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಮಂಡ್ಯ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಇಲ್ಲೂ ಕೂಡಾ ಮಾಸ್ಟರ್ ಮೈಂಡ್ ಕನಕಪುರ ಬಂಡೆ ಅಂತಾ ಕಾಂಗ್ರೆಸ್ ನಲ್ಲಿ ಕರೆಯೋ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ತಂತ್ರ ಹೆಣೆದಿದ್ದಾರೆ ಎಂದು ಹೇಳಲಾಗ್ತಿದೆ.
ರಾಜ್ಯ ರಾಜಕಾರಣದಲ್ಲಿ ಮತ್ತೆ ಕೃಷ್ಣ ಪರ್ವ ಆರಂಭವಾಗುವ ಮುನ್ನೂಚನೆ ಕಂಡು ಬರುತ್ತಿದ್ದು, ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಮೊಮ್ಮಗ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಪುತ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಅಳಿಯ ಅಮರ್ತ್ಯ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಇಳಿಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದ ಎಸ್.ಎಂ ಕೃಷ್ಣ ಅಳಿಯನ ಸಾವಿನ ಬಳಿಕ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಬಳಿಕ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಜೊತೆ ಸಂಬಂಧ ಬೆಳೆಸಿದ್ದರು. ಮದ್ದೂರಿನ ಸೋಮನಹಳ್ಳಿಯವರಾದ ಎಸ್.ಎಂ ಕೃಷ್ಣ ಹಾಗೂ ಪಕ್ಕದ ಜಿಲ್ಲೆ ರಾಮನಗರದ ಡಿ.ಕೆ ಶಿವಕುಮಾರ್ ಇಬ್ಬರೂ ತಮ್ಮ ಅಸ್ತಿತ್ವ ಹಾಗೂ ಪ್ರತಿಷ್ಟೆ ಮುಂದಿಟ್ಟು ಅಮರ್ತ್ಯ ಹೆಗ್ಡೆ ಗೆಲುವಿಗೆ ತಂತ್ರ ರೂಪಿಸಲಿದ್ದಾರೆ.