ಬೆಂಗಳೂರು: ಸಹಾಯ ಯಾವ ರೂಪದಲ್ಲಾದ್ರೂ ಆಗಬಹುದು. ಪೊಲೀಸರಲ್ಲಿಯೂ ಸಹಾಯ ಮಾಡೋ ಮನಸ್ಸಿರುತ್ತೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ಶಸ್ತ್ರ ಚಿಕಿತ್ಸೆಗೆ ದಾಖಲಾಗಿ, ಚಿಕಿತ್ಸೆ ಪಡೆದ ನಂತ್ರ ಆಸ್ಪತ್ರೆ ಬಿಲ್ ಕಟ್ಟಲಾಗದಂತ ಪರಿಸ್ಥಿತಿಯಿಂದ 112ಗೆ ಕರೆ ಮಾಡಿ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ಮುಂದೆ ಆಗಿದ್ದೇ ಅಚ್ಚರಿ..
ಹೌದು, ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮಹಿಳೆಯೊಬ್ಬರು 112ಗೆ ಕರೆ ಮಾಡಿ, ಶಸ್ತ್ರ ಚಿಕಿತ್ಸೆಗೆ ದಾಖಲಾಗಿ, ಚಿಕಿತ್ಸೆ ಪಡೆದ ನಂತ್ರ 1.25 ಲಕ್ಷ ರೂ ಬಿಲ್ ಕಟ್ಟಲಾಗದಂತ ಸ್ಥಿತಿಯನ್ನು ಹೇಳಿಕೊಂಡಿದ್ದಾರೆ.
ಈ ಕರೆಯ ಮಾಹಿತಿಯನ್ನು ಪಡೆದಂತ ಬೆಂಗಳೂರು ನಗರ ಪೊಲೀಸರ ಹೊಯ್ಸಳ-87 ಸಿಬ್ಬಂದಿ ಎಎಸ್ಐ ಜಗದೀಶ್, ಎಸಿಪಿ ಮೋಹನ್ ಕೂಡಲೇ ಆಸ್ಪತ್ರೆಗೆ ತೆರಳಿದ್ದಾರೆ. ಮಹಿಳೆಯ ಕಷ್ಟವನ್ನು ಆಲಿಸಿದ್ದಾರೆ. ಅಲ್ಲದೇ ತಮ್ಮ ಬಳಿಯಲ್ಲಿದ್ದಂತ 10 ಸಾವಿರ ಹಾಗೂ ಪರಿಚಯಸ್ಥರಿಂದ ರೂ.25,000 ಹಣದ ನೆರವನ್ನು ನೀಡಿದ್ದಾರೆ.
ಇನ್ನೂ ಇದಷ್ಟೇ ಅಲ್ಲದೇ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿ 1.25 ಲಕ್ಷ ಬಿಲ್ ನಲ್ಲಿ 20 ಸಾವಿರ ಕಡಿತಗೊಳಿಸಿದ್ದಾರೆ. ಕೊನೆಗೆ ಮಹಿಳೆಯ ಬಳಿಯಲ್ಲಿದ್ದಂತ 70 ಸಾವಿರ ಸೇರಿಸಿ ಒಟ್ಟು 1.05 ಲಕ್ಷವನ್ನು ಆಸ್ಪತ್ರೆಯ ಚಿಕಿತ್ಸೆ ಶುಲ್ಕವಾಗಿ ಪಾವತಿಸಿ, ಮಾನವೀಯತೆ ಮೆರೆದಿದ್ದಾರೆ. ಹೀಗೆ ಮಾನವೀಯತೆ ಮೆರೆದಂತ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಗೆಳ ಮಹಾ ಪೂರವೇ ಹರಿದು ಬರ್ತಾ ಇದೆ.
