ನವದೆಹಲಿ : ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿದ ಬಳಿಕ ಪರಾರಿಯಾಗಿ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಗಡೀಪಾರಿನ ಬಗ್ಗೆ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಇವರನ್ನು ಭಾರತಕ್ಕೆ ಒಪ್ಪಿಸಲು ತಾವು ಸಿದ್ಧ ಎಂದು ಹೇಳಿದ್ದಾರೆ. ಭಾರತಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿರುವ ಬೋರಿಸ್ ಜಾನ್ಸನ್ ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ‘ನಮಗೂ ಅವರನ್ನು (ನೀರವ್/ಮಲ್ಯ) ಭಾರತಕ್ಕೆ ಒಪ್ಪಿಸುವ ಮನಸ್ಸಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸುವ ಜನರನ್ನು ನಾವು ಸ್ವಾಗತಿಸುವುದಿಲ್ಲ. ಆದರೆ ಗಡೀಪಾರಿನ ಕುರಿತು ಹಲವು ಕಾನೂನಾತ್ಮಕ ಪ್ರಕ್ರಿಯೆಗಳಿವೆ ಎಂದರು. ಈ ಮೂಲಕ ಕಾನೂನಿನ ತೊಡಕು ನಿವಾರಣೆಯಾದರೆ ಖಂಡಿತವಾಗಿ ಮಲ್ಯ ಹಾಗೂ ನೀರವ್‌ರನ್ನು ಗಡೀಪಾರು ಮಾಡುವ ಇಂಗಿತ ವ್ಯಕ್ತಪಡಿಸಿದರು.
ಇದೇ ವೇಳೆ ಖಲಿಸ್ತಾನಿ ಉಗ್ರ ಚಟುವಟಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಭಾರತದಲ್ಲಿ ಸಕ್ರಿಯವಾಗಿರುವ ಮತ್ತು ಬೇರೆ ದೇಶಗಳ ವಿರುದ್ಧ ಸಂಚು ರೂಪಿಸುವ ಉಗ್ರವಾದಿಗಳ ಗುಂಪುಗಳನ್ನು ಸಹಿಸುವುದಿಲ್ಲ. ಅಂಥವರು ಬ್ರಿಟನ್ ನೆಲವನ್ನು ಬಳಸಿಕೊಂಡು ಇನ್ನೊಂದು ದೇಶದ ವಿರುದ್ಧ ಸಂಚು ರೂಪಿಸಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.