ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆ ಚುರುಕುಗೊಂಡಿದೆ. ಬಿಜೆಪಿ ಜೊತೆಗೆ ಈಗ ಕಾಂಗ್ರೆಸ್ ಕೊರಳಿಗೂ ಅಕ್ರಮದ ಉರುಳು ಸುತ್ತಿಕೊಳ್ಳುತ್ತಿದೆ. ಇಂದು ಅಕ್ರಮದಲ್ಲಿ ಪಾಲ್ಗೊಂಡಿರುವ ಆರೋಪ ಹೊತ್ತ ಕಾಂಗ್ರೆಸ್ ಮುಖಂಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಮೂಲಕ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಸಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ತಂಡ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಎಂಬಾತನನ್ನು ಬಂಧಿಸಿತು.
ಅಫಜಲಪುರ ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಫಂಕ್ಷನ್ ಹಾಲ್ನಲ್ಲಿ ಸಾಮೂಹಿಕ ವಿವಾಹವನ್ನು ಮಹಾಂತೇಶ ಪಾಟೀಲ ಹಾಗೂ ಆತನ ಸಹೋದರ ಆರ್.ಡಿ.ಪಾಟೀಲ ಏರ್ಪಡಿಸಿದ್ದರು. ಇಂದು ಅಲ್ಲಿಗೆ ತೆರಳಿದ ಸಿಐಡಿ ತಂಡ ಆರೋಪಿಯನ್ನು ಬಂಧಿಸಿದೆ. ನಿನ್ನೆ ಕಾಂಗ್ರೆಸ್ ಶಾಸಕ ಎಮ್.ವೈ.ಪಾಟೀಲ್ ಗನ್‌ಮ್ಯಾನ್ ಹಯ್ಯಾಳ ದೇಸಾಯಿಯನ್ನು ಬಂಧಿಸಲಾಗಿತ್ತು. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೇರಿಕೆಯಾಗಿದೆ.
ಬಂಧನಕ್ಕೆ ಆಗಮಿಸಿದ್ದ ಸಿಐಡಿ ಅಧಿಕಾರಿಗಳಿಗೆ, ‘ನಮ್ಮ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಹುಷಾರ್’ ಎಂದು ಮಹಾಂತೇಶ ಪಾಟೀಲ ಆವಾಜ್ ಹಾಕಿದ್ದರಂತೆ. ಇದರಿಂದ ಕೋಪಗೊಂಡ ಸಿಐಡಿ ಡಿವೈಎಸ್ಪಿ ಶಂಕರಗೌಡ, ಆರೋಪಿ ಕಾಂಗ್ರೆಸ್ ನಾಯಕ ಮಹಾಂತೇಶ್ ಪಾಟೀಲ್ ಕೊರಳಪಟ್ಟಿ ಹಿಡಿದು ಎಳೆದುಕೊಂಡು ಹೋದರು. ಈ ಸಂದರ್ಭದಲ್ಲಿ ಬೆಂಬಲಿಗರು ತನಿಖಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಕಂಡುಬಂದಿದೆ.
