ಬೆಂಗಳೂರು : ಗುತ್ತಿಗೆದಾರರಿಗೆ ಹಣ ಪಾವತಿ ವಿಳಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹೈಕೋರ್ಟ್, ‘ಇನ್ನೂ ಎಷ್ಟು ಜನ ಸಾಯಬೇಕು ಎಂದುಕೊಂಡಿದ್ದೀರಿ’ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿರುವ ಕಾಮಗಾರಿ ಗುತ್ತಿಗೆ ಹಣ ಪಾವತಿ ಸಂಬಂಧ ಬಿ.ಬಿ ಉಮೇಶ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ. ಪ್ರಶಾಂತ್ ಕುಮಾರ್ ವಾದ ಮಂಡಿಸಿ, ಅರ್ಜಿದಾರರು ಈಗಾಗಲೇ ಕಾಮಗಾರಿ ಪೂರ್ಣಗೊ ಳಿಸಿದ್ದಾರೆ. ಈ ಬಗ್ಗೆ ಪ್ರಮಾಣಪತ್ರವನ್ನೂ ಸಲ್ಲಿಸಿದ್ದಾರೆ. ಆದರೂ, ಬಿಬಿಎಂಪಿ ಹಣ ಪಾವತಿ ಮಾಡುತ್ತಿಲ್ಲ’ ಎಂದು ದೂರಿದರು. ಈ ವೇಳೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ಪ್ರಕರಣವನ್ನು ಪ್ರಸ್ತಾಪಿಸಿದ ಪೀಠ, ‘ಇನ್ನೂ ಎಷ್ಟು ಜನ ಗುತ್ತಿಗೆದಾರರು ಸಾಯಬೇಕು ಎಂದುಕೊಂಡಿದ್ದೀರಿ. ಕೆಲಸ ಮಾಡಿದರೂ ಹಣ ಪಾವತಿಗೆ ಯಾಕೆ ಮೀನಮೇಷ ಎಣಿಸುತ್ತಿದ್ದೀರಿ. ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ ಸಲ್ಲಿಸಿದರೂ ಹಣ ಪಾವತಿಸದೇ ಇರುವುದು ಸರಿಯಲ್ಲ’ ಎಂದು ಪಾಲಿಕೆ ನಡೆಯನ್ನು ಕಟುವಾಗಿ ಟೀಕಿಸಿತು.ಅಲ್ಲದೇ, ‘ಈ ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಹೀಗಾಗಿ, ಗುತ್ತಿಗೆದಾರರಿಗೆ ಈವರೆಗೆ ಬಿಲ್ ಮೊತ್ತ ಏಕೆ ಪಾವತಿಸಿಲ್ಲ ಎಂಬ ಬಗ್ಗೆ ನಾಡಿದ್ದು ಸೂಕ್ತ ವಿವರಣೆ ನೀಡಬೇಕು. ಇಲ್ಲದೇ ಹೋದಲ್ಲಿ ಪಾಲಿಕೆ ಆಯುಕ್ತರೇ ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಆದೇಶಿಸಲಾಗುವುದು’ ಎಂದು ಎಚ್ಚರಿಕೆ ನೀಡಿತು.
Check Also
ಧಾರವಾಡ ಲೋಕಸಭಾ ರಿಸಲ್ಟ್- ಇತಿಹಾಸ ಸೃಷ್ಟಿದ ಪ್ರಲ್ಹಾದ್ ಜೋಶಿ
Spread the loveಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಮಹತ್ವ ಇದೆ. ಕರ್ನಾಟಕ ಅಷ್ಟೇ ಅಲ್ಲಾ ದೇಶದ …