ಬೆಂಗಳೂರು: ಬಿಹಾರದಂತೆ ಕರ್ನಾಟಕದಲ್ಲೂ ಮೇವು ಖರೀದಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಮೇವು ಪೂರೈಕೆದಾರಿಗೆ ಬಿಲ್ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಹರ್ಷ ಅಸೋಸಿಯೇಟ್ಸ್ ಸಂಸ್ಥೆ ಜಿ.ಎಂ.ಸುರೇಶ್ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ನನ್ನ ಸಾವಿಗೆ ಪಶುಸಂಗೋಪನೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಜಿ.ಎಂ.ಸುರೇಶ್ ಏಪ್ರಿಲ್ 14ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
3 ಲೋಡ್ ಹಸಿ ಮೇವನ್ನು ಸರಬರಾಜು ಮಾಡಿದ್ದೇನೆ. ಆದರೆ ಅಧಿಕಾರಿಗಳು ಹಸಿ ಮೇವನ್ನು ಒಣ ಮೇವು ಎಂದು ಪರಿವರ್ತಿಸಿದ್ದಾರೆ. ಈ ಬಗ್ಗೆ ಸರಬರಾಜು ಮಾಡಿದ ಮಾಲೀಕರ ಗಮನಕ್ಕೆ ತಾರದೆ ಕಾನೂನು ಬಾಹಿರವಾಗಿ ಪರಿವರ್ತನೆ ಮಾಡಿದ್ದಾರೆ. ಗುತ್ತಿಗೆದಾರರ ಗಮನಕ್ಕೆ ತಾರದೆ ನಿಯಮ ಮೀರಿ ಸಭೆ ನಡೆಸಿದ್ದಾರೆ. ಹಳೆಯ ದರಕ್ಕೆ ಮೇವು ಸರಬರಾಜು ಲೆಕ್ಕ ಸೃಷ್ಟಿಸಿದ್ದಾರೆ. ಜಿಲ್ಲಾಡಳಿತದ ನಡೆಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ದೂರುದಾರರ ಪರ ತೀರ್ಪು ಬಂದಿದೆ. ಇಷ್ಟಾದರು ಬಾಕಿ ಹಣ ಬಿಡುಗಡೆ ಮಾಡದೆ ಅಧಿಕಾರಿಗಳು ಉದ್ಧಟತನ ತೋರುತ್ತಿದ್ದಾರೆ. 37 ಲಕ್ಷ ರೂಪಾಯಿ ಬಾಕಿ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.