ಹುಬ್ಬಳ್ಳಿ: ಬೈಸಾಖಿ ದಿನದ ಅಂಗವಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಗುರುದ್ವಾರದಲ್ಲಿ ಧರ್ಮ ಗ್ರಂಥ ‘ಗುರು ಗ್ರಂಥ ಸಾಹಿಬ್’ಗೆ ವಿಶೇಷ ಪೂಜೆ ಸಲ್ಲಿಸಿದರು. ಸುರಿಂದರ್ ಸಿಂಗ್ ಗಿಲ್ ಮತ್ತು ಗ್ಯಾನಿ ಮೇಜರ್ ಸಿಂಗ್ ಅವರ ತಂಡ ಕೀರ್ತನೆಗಳನ್ನು ಪ್ರಸ್ತುತಪಡಿಸಿತು.
‘ಸಿಖ್ ಧರ್ಮದ ಹತ್ತನೇ ಧರ್ಮಗುರು ಗುರು ಗೋವಿಂದ ಸಿಂಗ್ ಅವರು, ಪ್ರತಿ ಮನೆಯಲ್ಲೂ ಒಬ್ಬ ಸಿಖ್ ಆಗಬೇಕು ಎಂಬ ಆಶಯದಿಂದ ಧರ್ಮರಕ್ಷಣೆಗಾಗಿ 1699ರಲ್ಲಿ ಖಾಲ್ಸಾ ದೀಕ್ಷೆ ನೀಡಿದರು. ಅಂದಿನಿಂದ ಬೈಸಾಖಿ ದಿನ ಆಚರಿಸಿಕೊಂಡು ಬರಲಾಗುತ್ತದೆ. ಪಂಜಾಬ್‌ನಲ್ಲಿ ಈ ದಿನ ಉಳುಮೆ ಅಥವಾ ಬಿತ್ತನೆ ಕೆಲಸವನ್ನು ಸಾಂಕೇತಿಕವಾಗಿ ಆರಂಭಿಸಲಾಗುತ್ತದೆ’ ಎಂದು ಹುಬ್ಬಳ್ಳಿಯ ಗುರುನಾನಕ್ ಮಿಷನ್ ಟ್ರಸ್ಟ್ ಕಾರ್ಯದರ್ಶಿ ಜಸ್ವೀರ್ ಸಿಂಗ್ ಹೇಳಿದರು. ಟ್ರಸ್ಟ್ ಅಧ್ಯಕ್ಷ ಜಸ್ಮೇಲ್ ಸಿಂಗ್, ಪದಾಧಿಕಾರಿಗಳು ಇದ್ದರು.
