ಹುಬ್ಬಳ್ಳಿ: ಕೆ.ಎಸ್. ಈಶ್ವರಪ್ಪ ಅವರ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೆಲ್ಲವೂ ಕಾಂಗ್ರೆಸ್ ಷಡ್ಯಂತ್ರ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಆರೋಪಿಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುತ್ತಿಗೆ ಕಾಮಗಾರಿಗೆಯಲ್ಲಿ ಶೇ 40 ರಷ್ಟು ಕಮಿಷನ್ ಪಡೆಯುತ್ತಾರೆ ಎನ್ನುವುದರಲ್ಲಿ ಅರ್ಥವಿಲ್ಲ. ಈ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಅದರ ನೇತಾರರು ಷಡ್ಯಂತ್ರ ನಡೆಸುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸಿ ಬದುಕುತ್ತಾರೆ. ಶೇ 40ರಷ್ಟು ಕಮಿಷನ್ ಅನ್ನುವುದೇ ಗೊಂದಲದ ವಿಷಯ. ಗುತ್ತಿಗೆದಾರರ ಆರೋಪದ ಹಿಂದೆಯೂ ಕಾಂಗ್ರೆಸ್ ಕೈವಾಡವಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಸತ್ಯ ಬಹಿರಂಗವಾಗಲಿದೆ. ರಾಜ್ಯದ ಜನತೆಗೂ ಸತ್ಯ ಏನೆಂದು ತಿಳಿದಿದೆ ಎಂದರು.
ಅನೇಕ ವರ್ಷಗಳಿಂದ ಕಾಂಗ್ರೆಸ್ ಗೊಂದಲಗಳನ್ನು ಸೃಷ್ಟಿಸುತ್ತಲೇ ಬಂದಿದೆ. ಹಿಂದಿನ ದಾಖಲೆಗಳನ್ನು ತೆಗೆದು ನೋಡಿದರೆ ಸತ್ಯ ತಿಳಿಯುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಹುಲ್ ಗಾಂಧಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಉಳಿದ ವೇಳೆ ನಾಪತ್ತೆಯಾಗುತ್ತಾರೆ. ಕೋವಿಡ್ ವ್ಯಾಕ್ಸಿನ್ ಬಂದಾಗ ರಾಹುಲ್ ಗಾಂಧಿ ಮೋದಿ ವ್ಯಾಕ್ಸಿನ್ ಎಂದಿದ್ದರು. ನಂತರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅದೇ ವ್ಯಾಕ್ಸಿನ್ ಪಡೆಯುತ್ತಾರೆ ಎಂದು ವ್ಯಂಗ್ಯವಾಡಿದರು. ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದಾಗ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು. ಕೋರ್ಟ್‌ನಲ್ಲಿ ರಾಮಮಂದಿರ ವಿಷಯ ಬಂದಾಗಲೂ ಗೊಂದಲ ಸೃಷ್ಟಿಸಿ ತೀರ್ಪು ನೀಡದಂತೆ ನ್ಯಾಯಧೀಶರಿಗೆ ಒತ್ತಡ ಹೇರಿತ್ತು. ಇದೆಲ್ಲವನ್ನೂ ನೋಡಿದಾಗ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿದೆ ಎಂದು ಭಾಸವಾಗುತ್ತದೆ. ಈಶ್ವರಪ್ಪ ವಿಷಯದಲ್ಲೂ ಅದೇ ಆಗಿದೆ’ ಎಂದರು.
ಕಾಂಗ್ರೆಸ್ ಜನರ ನಡುವೆ ಹೋಗುವುದಿಲ್ಲ. ಯಾವ ಅಭಿವೃದ್ಧಿ ಕೆಲಸಕ್ಕೂ ಕೈ ಜೋಡಿಸುವುದಿಲ್ಲ. ಅವರ ಎಲ್ಲ ಮುಖಂಡರು ಸಹ ಷಡ್ಯಂತ್ರ ನಡೆಸುವುದರಲ್ಲಿಯೇ ಕಾಲ ಕಳೆಯುತ್ತಾರೆ ಎಂದು ಆರೋಪಿಸಿದರು. ಕರ್ನಾಟಕ ಸೇರಿ ಮುಂಬರುವ ಎಲ್ಲ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ಭವಿಷ್ಯ ನುಡಿದರು. ಹೊಸಪೇಟೆಯಲ್ಲಿ ನಡೆಯಬೇಕಿರುವ ಕಾರ್ಯಕಾರಿಣಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಾಲ್ಗೊಳ್ಳಲಿದ್ದಾರೆ. ಅವರ ಸ್ವಾಗತಕ್ಕೆ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ನಡೆಸಿದ್ದಾರೆ. ಕಾರ್ಯಕಾರಿಣಿ ಪಕ್ಷದ ಕಾರ್ಯಕರ್ತರಿಗೆ ಉತ್ತೇಜನ ನೀಡಲಿದೆ ಎಂದರು.
ಪಿಎಫ್ಐ ಸಂಘಟನೆ ನಿಷೇಧ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಫ್ಐ ಸಂಘಟನೆ ಪಥಸಂಚಲನ ನಡೆಯುತ್ತಿತ್ತು. ಆ ಸಂದರ್ಭ 23 ಹಿಂದೂಗಳ ಹತ್ಯೆ ಸಹ ನಡೆದಿತ್ತು. ಬಿಜೆಪಿ ಸರ್ಕಾರ ಬಂದಾಗ ಸಂಘಟನೆಯನ್ನು ನಿಯಂತ್ರಿಸಿದೆ. ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಪಿಎಫ್ಐ ಸಕ್ರಿಯವಾಗಿದೆ. ಕೆಲವೆಡೆ ಗಲಭೆ ಸಹ ನಡೆಯುತ್ತಿವೆ. ಇದಕ್ಕೆ ಕಾಂಗ್ರೆಸ್ ಬೆಂಬಲವಿರುವುದು ವ್ಯಕ್ತವಾಗುತ್ತಿದೆ’ ಎಂದು ಆರೋಪಿಸಿದರು. ಕೆಪಿಸಿಸಿ ಮುಖಂಡರೊಬ್ಬರು ಕೆ.ಎಸ್. ಈಶ್ವರಪ್ಪ ಅವರ ಆರೋಪ ಪ್ರಕರಣದ ಹಿಂದಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸತ್ಯ ಹೊರ ಬೀಳಲಿದೆ.