ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಇಂದು ಭೇಟಿ ನೀಡಿದರು. ಶೀಘ್ರ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕೆಜಿಎಫ್-2 ಚಿತ್ರತಂಡದ ಜತೆಯಲ್ಲಿ ಯಶ್ ಕ್ಷೇತ್ರಕ್ಕೆ ಭೇಟಿ ನೀಡಿದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಯಶ್ ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಜೊತೆಗೆ ಮಾತುಕತೆ ನಡೆಸಿದರು. ಇನ್ನು ಸುಬ್ರಹ್ಮಣ್ಯದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಂ ಸುಳ್ಳಿ ಚಿತ್ರತಂಡವನ್ನು ಸ್ವಾಗತಿಸಿದರು. ಯಶ್ ಹಾಗೂ ಸಂಗಡಿಗರು ಕ್ಷೇತ್ರದಲ್ಲಿ ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಶೋಭಾ ಗಿರಿಧರ್, ಎಇಒ ಪುಷ್ಪಲತಾ, ಶಿಷ್ಟಾಚಾರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
