ಬೆಂಗಳೂರು: ರಾಜ್ಯದಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಕುರಿತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಪ್ರಸ್ತಾಪವೂ ಇಲ್ಲ. ಯಾವ ಎಪಿಎಂಸಿ ಹಾಗೂ ರೈತರಿಗೆ ತೊಂದರೆಯಾಗಿದೆ ಎಂದು ಒಂದೇ ಒಂದು ದೂರು ಬಂದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಕೃಷಿ ಕಾಯ್ದೆ ವಾಪಸ್ ಪಡೆಯುವುದಿಲ್ಲ: ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿದ್ದರೂ ರಾಜ್ಯದಲ್ಲಿ ಕೃಷಿ ಕಾಯ್ದೆಗಳ ವಾಪಸ್ ಪಡೆಯುವ ಚಿಂತನೆ ಇಲ್ಲ. ಎಪಿಎಂಸಿ ಒಳಗೆ ಮಾರಾಟ ಮಾಡುವ ನಿರ್ಬಂಧ ತೆಗೆದು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎನ್ನುವ ಅವಕಾಶವನ್ನು ಸ್ವಾಗತಿಸಿದ್ದಾರೆ. ಮೊದಲು ಹೀಗೆ ಮಾಡಿದರೆ ದಂಡ ವಿಧಿಸುವ, ಜೈಲಿಗೆ ಹಾಕುವ ಅವಕಾಶವಿತ್ತು, ಈಗ ನಿರ್ಬಂಧ ಮುಕ್ತ ಮಾಡಿದ್ದರಿಂದ ಯಾರೂ ವಿರೋಧಿಸುತ್ತಿಲ್ಲ. ಈವರೆಗೆ ಒಂದೇ ಒಂದು ದೂರು ಎಪಿಎಂಸಿ ಮತ್ತು ಸರ್ಕಾರಕ್ಕೆ ಬಂದಿಲ್ಲ. ಹಾಗಾಗಿ ಕಾಯ್ದೆ ವಾಪಸ್ ಪಡೆಯುವ ಪ್ರಮೇಯ ಇಲ್ಲ. ಈ ಕುರಿತು ನಾಳೆ ಅಮಿತ್ ಶಾ ಜೊತೆ ಚರ್ಚೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದ ರೈತ ಸಂಘಟನೆಗಳ ಮುಖಂಡರು ಸಿಎಂ ಜೊತೆ ಚರ್ಚಿಸಿದ್ದಾರೆ. ಈ ವೇಳೆ ರೈತನ ಬೆಳೆ ಇಡೀ ರಾಜ್ಯದ ಎಲ್ಲಿ ಬೇಕಾದರೂ ಮಾರಾಟ ಮಾಡಿದರೆ ಅನುಕೂಲವಾಗಲಿದೆಯಾ? ಅಥವಾ ಒಂದು ಎಪಿಎಂಸಿಯಲ್ಲಿ ಮಾರಾಟ ಮಾಡುವುದು ಅನುಕೂಲವಾ? ಎಂದು ರೈತರಿಗೆ ಸಿಎಂ ಕೇಳಿದ್ದಾರೆ. ರೈತ ಸಂಘಟನೆಗಳ ಮನವೊಲಿಸುವಲ್ಲಿ ಸಿಎಂ ಸಫಲರಾಗಿದ್ದಾರೆ ಎಂದು ಸಚಿವರು ಹೇಳಿದರು.
*ನಾಳೆ ಸಹಕಾರ ಇಲಾಖೆಯಿಂದ 3 ಕಾರ್ಯಕ್ರಮ* ನಾಳೆ ಸಂಜೆ 4 ಗಂಟೆಗೆ ಬೆಂಗಳೂರು ಪ್ಯಾಲೇಸ್ ಗ್ರೌಂಡ್‍ನಲ್ಲಿ ಸಹಕಾರ ಸಮ್ಮೇಳನ ಮತ್ತು ಸಹಕಾರ ಲಾಂಛನ ಸೇರಿ ವಿವಿಧ ಕಾರ್ಯಕ್ರಮಗಳನ್ನು ಕೇಂದ್ರ ಸಚಿವರಾದ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಗೋಪೂಜೆ ನೆರವೇರಿಸಲಿದ್ದಾರೆ. ನಂತರ ಕೆಎಂಎಫ್ ಹೊರತಂದಿರವ 50-60 ಹೊಸ ಉತ್ಪನ್ನಗಳ ಸ್ಟಾಲ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
