ಮೈಸೂರು: ಜನ ನನ್ನನ್ನ ಮುಂದಿನ ಚುನಾವಣೆಯಲ್ಲಿ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ ಬಾದಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಾನು ಮುಂದೆ ಚುನಾವಣಾ ರಾಜಕೀಯ ಮಾಡುವುದಿಲ್ಲ, ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಸಿದ್ದರಾಮನಹುಂಡಿಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಯ ಮನೆಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಜನ ನನಗೆ ವರುಣಾ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಕೋಲಾರ, ಬಾದಮಿಯಿಂದ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡುತ್ತಿದ್ದಾರೆ. ಆದರೆ, ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿಲ್ಲ.ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಪುನರ್ ಜನ್ಮ ನೀಡಿದೆ. ಕಳೆದ ಬಾರಿ ಅದೇ ಜನ ನನ್ನನ್ನ ಸೋಲಿಸಿದ್ದರು. ಆದರೆ ಐದಾರು ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನ ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರವನ್ನ ನಾನು ಯಾವಾಗಲೂ ಮರೆಯುವುದಿಲ್ಲ ಎಂದರು.
ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ಮತ್ತೆ ಚುನಾವಣಾ ರಾಜಕಾರಣ ಮಾಡುವುದಿಲ್ಲ. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಅದಕ್ಕಾಗಿ ನನ್ನನ್ನ ಹಲವಾರು ಕ್ಷೇತ್ರದ ಜನ ಸ್ಪರ್ಧೆ ಮಾಡುವಂತೆ ಕರೆಯುತ್ತಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
