ಹುಬ್ಬಳ್ಳಿ,- ಭಾರತದ ಮೊದಲ ಇಂಟೆಲಿಜೆಂಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಕ ಸಂಸ್ಥೆ ಎಥರ್ ಎನರ್ಜಿ ನಗರದ ಬೈರಿದೇವರಕೊಪ್ಪದಲ್ಲಿ ತನ್ನ ಹೊಸ ಎಥರ್ ಸ್ಪೇಸ್ ರಿಟೇಲ್ ಮಳಿಗೆಗೆ ಚಾಲನೆ ನೀಡಿದೆ. ಬೆಲ್ಲದ ಗ್ರೂಪ್ ಇದರ ಪಾಲುದಾರ ಕಂಪೆನಿಯಾಗಿದೆ. ಬೆಂಗಳೂರಿನಲ್ಲಿ ಎರಡು ಮತ್ತು ಮೈಸೂರಿನಲ್ಲಿ ಒಂದು ಮಳಿಗೆಯ ಬಳಿಕ ಕರ್ನಾಟಕದಲ್ಲಿ ಇದು ಎಥರ್ ಎನರ್ಜಿಯ ನಾಲ್ಕನೇ ರಿಟೇಲ್ ಮಳಿಗೆಯಾಗಿದೆ. ಭಾರತದ ಅತಿ ವೇಗದ ಮತ್ತು ಸ್ಮಾರ್ಟ್ ಸ್ಕೂಟರ್‌ಗಳಲ್ಲಿ ಒಂದಾಗಿರುವ ಎಥರ್ 450X ಮತ್ತು ಎಥರ್ 450 ಪ್ಲಸ್ ಸ್ಕೂಟರ್‌ಗಳು ಇಲ್ಲಿ ಟೆಸ್ಟ್ ರೈಡ್ ಮತ್ತು ಖರೀದಿಗೆ ಲಭ್ಯವಿದೆ.
2020ರ ಜನವರಿಯಲ್ಲಿ ಎಥರ್ 450X ಮತ್ತು ಎಥರ್ 450 ಪ್ಲಸ್ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾದಾಗಿನಿಂದ ಗ್ರಾಹಕರಲ್ಲಿ ಬೇಡಿಕೆ ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಎಥರ್ ಸ್ಪೇಸ್ ಮಳಿಗೆಯನ್ನು ಕಂಪೆನಿ ಆರಂಭಿಸಿದೆ. ಹುಬ್ಬಳ್ಳಿಯಲ್ಲಿ ಈ ವರ್ಷದ ಆರಂಭದಿಂದಲೇ ಎಥರ್ ವಾಹನಗಳ ವಿತರಣೆ ಆರಂಭವಾಗಿದೆ.
ಹೊಸ ಮಳಿಗೆಯ ಆರಂಭದ ಕುರಿತು ಮಾತನಾಡಿದ ಎಥರ್ ಎನರ್ಜಿಯ ಚೀಫ್ ಬಿಸಿನೆಸ್ ಆಫೀಸರ್ ರವನೀತ್ ಫೋಕೇಲಾ ಅವರು “ಎರಡನೇ ಹಂತದ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಆಸಕ್ತಿ ಮತ್ತು ಬೇಡಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವುದು ಇಂದು ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಗೆ ಮುಖ್ಯ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ನಾವು ರಿಟೇಲ್ ಮಳಿಗೆ ತೆರೆಯುವ ಮೊದಲೇ ಕಳೆದ ತ್ರೈಮಾಸಿಕ ಅವಧಿಯಲ್ಲಿ ಎಥರ್ ವಾಹನಗಳ ಮಾರಾಟ ದುಪ್ಪಟ್ಟಾಗಿದೆ. ಟೆಸ್ಟ್ ರೈಡ್ ಮತ್ತು ವಾಹನಗಳ ಬುಕಿಂಗ್‌ಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹುಬ್ಬಳ್ಳಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಸಜ್ಜಾಗಿದೆ ಎಂಬುದು ನಮ್ಮ ಗಮನಕ್ಕೆ ಬಂತು. ಕರ್ನಾಟಕದಲ್ಲಿ ಎಥರ್ ಸ್ಪೇಸ್ ಮಳಿಗೆ ಮೂರನೇ ನಗರ ಇದಾಗಿದೆ. ಗ್ರಾಹಕರ ಅನಿಸಿಕೆ, ಬೇಡಿಕೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ಬೆಲ್ಲದ್ ಗ್ರೂಪ್ ನಮಗೆ ಅಮೂಲ್ಯ ವಿಶ್ಲೇಷಣಾತ್ಮಕ ಮಾಹಿತಿ ನೀಡಿದೆ” ಎಂದು ಹೇಳಿದರು.
ಎಥರ್ ಸ್ಪೇಸ್ ಗ್ರಾಹಕರಿಗೆ ಉತ್ತಮ ಮಾಲೀಕತ್ವ ಅನುಭವ ಮತ್ತು ಪರಿಪೂರ್ಣ ಸೇವೆಯನ್ನು ಒದಗಿಸಲಿದೆ. ಹೊಸ ಎಥರ್ ಸ್ಪೇಸ್ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅವಕಾಶ ನೀಡುವುದಲ್ಲದೇ ವಾಹನದ ಎಲ್ಲ ಬಿಡಿಭಾಗಗಳನ್ನೂ ಪರಿಚಯಿಸಲಿದೆ. ಅನುಭವ ಕೇಂದ್ರಕ್ಕೆ ಭೇಟಿ ನೀಡುವ ಮೊದಲು ಎಥರ್ ಎನರ್ಜಿಯ ವೆಬ್‌ಸೈಟಿನಲ್ಲಿ ಗ್ರಾಹಕರು ಟೆಸ್ಟ್ ರೈಡ್‌ಗಳನ್ನು ಬುಕ್ ಮಾಡಬಹುದು. ಎಥರ್ ತನ್ನ ಅಸ್ತಿತ್ವವನ್ನು ಭಾರತದ ಹಲವು ನಗರಗಳಿಗೆ ವಿಸ್ತರಿಸಿದ್ದು ಪ್ರಸ್ತುತ 19 ನಗರಗಳಲ್ಲಿ 22 ಅನುಭವ ಕೇಂದ್ರಗಳನ್ನು ಹೊಂದಿದೆ. 2022ರ ಮಾರ್ಚ್ ವೇಳಗೆ 42 ನಗರಗಳಲ್ಲಿ 50 ಅನುಭವ ಕೇಂದ್ರಗಳನ್ನು ತೆರೆಯುವ ಉದ್ದೇಶ ಹೊಂದಿದೆ.
ಬೆಲ್ಲದ್ ಗ್ರೂಪ್‌ನ ನಿರ್ದೇಶಕರಾದ ಅಗಸ್ತ್ಯ ಬೆಲ್ಲದ ಅವರು ಮಾತನಾಡಿ “ಹುಬ್ಬಳ್ಳಿ ಧಾರವಾಡದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಎಥರ್ ಎನರ್ಜಿ ಜೊತೆ ಪಾಲುದಾರರಾಗಲು ನಮಗೆ ಸಂತೋಷವಾಗುತ್ತಿದೆ. ಎಥರ್ ಎನರ್ಜಿ ಸುಸ್ಥಿರ, ಉತ್ತಮ ಗುಣಮಟ್ಟದ ಮತ್ತು ಅಧಿಕ ಸಾಮರ್ಥ್ಯದ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದ್ದಲ್ಲದೇ, ಅದಕ್ಕೆ ಪೂರಕವಾಗಿ ಚಾರ್ಜಿಂಗ್ ಮೂಲಸೌಕರ್ಯವನ್ನೂ ನಿರ್ಮಿಸುತ್ತಿದೆ. ಗ್ರಾಹಕರಿಂದ ನಮಗೆ ಉತ್ತೇಜನಕಾರಿ ಪ್ರತಿಕ್ರಿಯೆ ಬರುತ್ತಿದ್ದು, ಈಗಾಗಲೇ 500 ವಾಹನಗಳನ್ನೂ ಮಾರಾಟ ಮಾಡಲಾಗಿದೆ. ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿಯಿಂದಲೂ ನಮಗೆ ಗ್ರಾಹಕರಿದ್ದಾರೆ. ಎಥರ್ ಸ್ಪೇಸ್ ತೆರೆಯುವ ಮೂಲಕ ನಾವು ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡಲು ಸಜ್ಜಾಗಿದ್ದೇವೆ” ಎಂದರು.
ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸಲು ಬಂಡವಾಳ ಹೂಡುತ್ತಿರುವ ಕೆಲವೇ ಓಇಎಂಗಳಲ್ಲಿ ಎಥರ್ ಎನರ್ಜಿಯೂ ಸೇರಿದೆ. ಕಂಪೆನಿ ಇದುವರೆಗೆ ವಿದ್ಯಾನಗರ, ದೇಶಪಾಂಡೆನಗರ, ಗೋಕುಲ ರಸ್ತೆ ಮತ್ತು ಬೈರಿದೇವರಕೊಪ್ಪದಲ್ಲಿ ನಾಲ್ಕು ತ್ವರಿತ ಚಾರ್ಜಿಂಗ್ ಪಾಯಿಂಟ್‌ಗಳಾದ ಎಥರ್ ಗ್ರಿಡ್‌ಗಳನ್ನು ಸ್ಥಾಪಿಸಿದೆ. ಹುಬ್ಬಳ್ಳಿಯಲ್ಲಿ ಎಲ್ಲ ಎಲೆಕ್ಟ್ರಿಕ್ ವಾಹನಗಳ ಮಾಲೀಕರಿಗೆ ಈ ಸೌಲಭ್ಯ ದೊರೆಯುವಂತೆ ಈ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 8- 10 ಚಾರ್ಜಿಂಗ್ ಪಾಯಿಂಟ್‌ಗಳನ್ನು ನಗರದಲ್ಲಿ ಆರಂಭಿಸಲು ಕಂಪೆನಿ ಯೋಜಿಸಿದೆ. ಅಲ್ಲದೇ ಅಪಾರ್ಟ್‌ಮೆಂಟ್‌ಗಳು ಮತ್ತು ಕಟ್ಟಡಗಳಲ್ಲಿಯೂ ಹೋಮ್ ಚಾರ್ಜಿಂಗ್ ಸೌಕರ್ಯಗಳನ್ನು ಹೊಂದಲು ಎಥರ್ ಎನರ್ಜಿ ಗ್ರಾಹಕರಿಗೆ ನೆರವಾಗಲಿದೆ.
ಫೇಮ್ 2 ನೀತಿಯ ಜಾರಿಯ ಬಳಿಕ ಎಥರ್ 450X ಬೆಲೆ 1,44,500 ರೂಪಾಯಿ ಮತ್ತು 450 ಪ್ಲಸ್ ಬೆಲೆ 1,24,490 ರೂಪಾಯಿಗಳಾಗಿವೆ ಎಂದರು.