ಹುಬ್ಬಳ್ಳಿ: ‘ಕನ್ನಡ ಭಾಷೆ ಬಳಸುವ ಜೊತೆಗೆ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದೇವೇಂದ್ರಪ್ಪ ಎನ್. ಬಿರಾದಾರ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಉಪ ಕಾರಾಗೃಹದಲ್ಲಿ ‘ಕಲಿಕೆಯಿಂದ ಬದಲಾವಣೆ’ಗಾಗಿ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ, ಅನಕ್ಷರಸ್ಥ ಮತ್ತು ಅರೆ ಅಕ್ಷರಸ್ಥ ಕೈದಿಗಳಿಗೆ ಕಲಿಕಾ ಬೋಧನಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಮುಂಚೆ ಐನೂರಕ್ಕೂ ಹೆಚ್ಚು ಪ್ರಾಂತ್ಯಗಳು ರಾಜರ ಆಳ್ವಿಕೆಯಲ್ಲಿದ್ದವು. ಸ್ವಾತಂತ್ರ್ಯ ನಂತರ ಭಾಷೆ ಆಧಾರದಲ್ಲಿ ರಾಜ್ಯಗಳ ರಚನೆಯಾಯಿತು. ಜಗತ್ತಿನ ಶ್ರೇಷ್ಠ ಭಾಷೆಗಳಲ್ಲೊಂದಾದ ಕನ್ನಡ ಇತರ ಭಾಷೆಯ ಪದಗಳನ್ನು ಕನ್ನಡಿಕರಿಸಿಕೊಂಡು ಬೆಳೆದಿದೆ. ಮುಂದೆಯೂ ಬೆಳೆಯಲಿದೆ. ಬದುಕು ರೂಪಿಸಿಕೊಳ್ಳುವಲ್ಲಿ ಅಕ್ಷರ ಜ್ಞಾನದ ಪಾತ್ರ ಮಹತ್ವದ್ದಾಗಿದೆ. ಕೈದಿಗಳು ಕೀಳರಿಮೆ ಬಿಟ್ಟು ಶಿಕ್ಷಣ ಪಡೆಯಬೇಕು’ ಎಂದರು.
ತಹಶಿಲ್ದಾರ್ ಶಶಿಧರ ಮಾಡ್ಯಾಳ ಮಾತನಾಡಿ, ‘ಜೀವನಕ್ಕೆ ಬೇಕಾದ ಸಂಸ್ಕಾರವನ್ನು ಶಿಕ್ಷಣ ನೀಡುತ್ತದೆ. ವಿದ್ಯೆಯೊಂದೇ ಮನುಷ್ಯನನ್ನು ಸದಾ ಕಾಯುವ ಅಸ್ತ್ರ’ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ‘ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಅಕ್ಷರ ಜ್ಞಾನ ಕಲಿಸುವ ಸಾಕ್ಷರತೆ ಯೋಜನೆ ಇದಾಗಿದೆ. ನಿವೃತ್ತ ಶಿಕ್ಷಕರು ಸೇರಿದಂತೆ ಇತರ ಸಂಪನ್ಮೂಲ ವ್ಯಕ್ತಿಗಳಿಂದ ಸಾಕ್ಷರತೆ ತರಬೇತಿ ನೀಡಲಾಗುತ್ತದೆ’ ಎಂದರು.
ಎಸ್.ಆರ್. ರಾಚಣ್ಣವರ ಕಲಿಕಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಜಾನಪದ ವಿದ್ವಾಂಸ ರಾಮು ಮೂಲಗಿ ಕನ್ನಡ ಹಾಡುಗಳನ್ನು ಹಾಡಿದರು. ಉಪ ಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್ ಅರುಣಕುಮಾರ ಸಾಳುಂಕೆ ಇದ್ದರು.
ಲೋಕ ಶಿಕ್ಷಣ ನಿರ್ದೇಶನಾಲಯ, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹುಬ್ಬಳ್ಳಿ ಉಪ ಕಾರಾಗೃಹ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
Check Also
ಆಕಾಶ್ ನಿಂದ (ಎಇಎಸ್ ಎಲ್) ನ ಅಂತೆ 2024 ಪರೀಕ್ಷೆ ಘೋಷಣೆ
Spread the loveಹುಬ್ಬಳ್ಳಿ : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ …