ಹುಬ್ಬಳ್ಳಿ: ನಗರದ ನೃಪತುಂಗ ಬೆಟ್ಟ ಸುತ್ತ ಹಾಗೂ ಧಾರವಾಡ ತಾಲೂಕು ಕವಲಗೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಒಂದೆಯೋ, ಬೇರೆ ಬೇರೆಯೋ ಎಂದು ಖಚಿತ ಪಡಿಸಿಕೊಳ್ಳಲು ಅರಣ್ಯ ಇಲಾಖೆಯವರು ಅದರ ಮಲ (ಲದ್ದಿ)ವನ್ನು ಹೈದರಾಬಾದ್‌ನ ಸಿಸಿಎಂಬಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಅರಣ್ಯ ಇಲಾಖೆಯವರಿಗೆ ಹುಬ್ಬಳ್ಳಿಯಲ್ಲಿ ಕಾಣಿಸಿಕೊಂಡಿದ್ದ ಚಿರತೆಯ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಸಿಕ್ಕಿಲ್ಲ. ಆದರೆ ಕವಲಗೇರಿಯಲ್ಲಿ ಸ್ಪಷ್ಟವಾಗಿ ದೊರೆತಿದ್ದು, ಅದರ ಅಳತೆ ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಸಿಕ್ಕಿರುವ ಚಿರತೆಯ ಹೆಜ್ಜೆ ಗುರುತು ಹಾಗೂ ಕವಲಗೇರಿಯಲ್ಲಿ ದೊರೆತ ಹೆಜ್ಜೆ ಕುರುಹುಗಳನ್ನು ಸಂಗ್ರಹಿಸಿ ಶುಕ್ರವಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಜನಗರದ ಕೇಂದ್ರೀಯ ವಿದ್ಯಾಲಯ ಪ್ರಾಂಗಣದಲ್ಲಿ ಕಾಣಿಸಿಕೊಂಡ ಮೂರು ದಿನಗಳ ಬಳಿಕ ಸೋಮವಾರ ಸಂಜೆ ಶಿರಡಿ ನಗರ ಹನುಮಾನ ಮಂದಿರ ಬಳಿ ಚಿರತೆ ಪ್ರತ್ಯಕ್ಷವಾಗಿ ಹಂದಿ ಹಿಡಿದುಕೊಂಡು ಹೋಗಿತ್ತು. ಅಂದು ಅರಣ್ಯ ಇಲಾಖೆಯವರು ರಾತ್ರಿಯಿಡಿ ಪಟಾಕಿ ಸಿಡಿಸಿ, ಗರ್ನಾಲ್ ಹಾರಿಸಿ ಕಾರ್ಯಾಚರಣೆ ಮಾಡಿದ್ದರು. ಅದು ಭಯಗೊಂಡು ಅದೇ ದಿನ ಇಲ್ಲಿಂದ ಬಹುತೇಕವಾಗಿ ಕವಲಗೇರಿಗೆ ಪಲಾಯಗೈದಿರಬಹುದೆಂದು ಅರಣ್ಯ ಇಲಾಖೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.
