ಹುಬ್ಬಳ್ಳಿ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯ ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದ ಸಂಬಂಧಿಕನಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 60,000 ರೂ. ದಂಡ ವಿಧಿಸಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಕುಂದಗೋಳ ತಾಲೂಕಿನ ಗುಡಗೇರಿಯ ಮಂಜುನಾಥ ಗಾಣಿಗೇರ ಶಿಕ್ಷೆಗೀಡಾದ ಅಪರಾಧಿ.
ಪ್ರಕರಣದ ಸಾರಾಂಶ : ಅಕ್ಟೋಬರ್ 7, 2015ರಂದು ಮಂಜುನಾಥ ಗಾಣಗೇರ ಸಂಬಂಧಿಕರ ಮನೆಯಲ್ಲಿ ಯುವತಿಯನ್ನು ಬಿಟ್ಟು ಬೇರೆ ಯಾರೂ ಇಲ್ಲದಿರುವುದನ್ನು ಗಮನಿಸಿ ಆಕೆಯ ಮನೆಗೆ ಹೋಗಿದ್ದ. ‘ಮನೆಯಲ್ಲಿ ಯಾರೂ ಇಲ್ಲ. ಮನೆಯವರು ಬಂದ ಮೇಲೆ ಬಾ’ ಎಂದು ಯುವತಿ ಹೇಳಿದ್ದಳು. ಆದರೂ, ಆತ ‘ಕುಡಿಯಲು ನೀರು ತೆಗೆದುಕೊಂಡು ಬಾ’ ಎಂದು ಹೇಳಿ ಆಕೆಯ ಹಿಂದೆ ಹೋಗಿ ಅತ್ಯಾಚಾರ ಎಸಗಿದ್ದ. ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದ.
ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಎನ್. ಬಿರಾದಾರ ಅವರು ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 60 ಸಾವಿರ ರೂ. ದಂಡ ವಿಧಿಸಿದ್ದಾರೆ. ಇದರಲ್ಲಿ 50 ಸಾವಿರ ರೂ. ನೊಂದ ಮಹಿಳೆಗೆ ಹಾಗೂ 10 ಸಾವಿರ ರೂ. ಸರ್ಕಾರಕ್ಕೆ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.