ಹುಬ್ಬಳ್ಳಿ: ‘ಬಿಜೆಪಿ ಸತತ ಮೂರನೇ ಸಲವೂ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲಿದೆ. ಎರಡು ವರ್ಷಗಳ ಅವಧಿಯಲ್ಲಿ ಪಕ್ಷವು ಅವಳಿನಗರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳನ್ನು ಜನ ಗುರುತಿಸಿ ಮತ ಹಾಕಲಿದ್ದಾರೆ’ ಎಂದು ಶಾಸಕ ಜಗದೀಶ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ದೇಶಪಾಂಡೆ ನಗರದಲ್ಲಿ ಪಕ್ಷದ ಪಾಲಿಕೆ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ‘2013ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷವು ಬಿಜೆಪಿ, ಕೆಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಆಗಿ ವಿಭಜನೆಯಾಗಿತ್ತು. ಆದರೂ, ಸಂಘಟಿತ ಪ್ರಯತ್ನದಿಂದಾಗಿ ಪಾಲಿಕೆ ಅಧಿಕಾರ ಹಿಡಿಯುವಲ್ಲಿ ಪಕ್ಷ ಯಶಸ್ವಿಯಾಗಿತ್ತು’ ಎಂದು ನೆನೆದರು.
‘ವಾರ್ಡ್‌ಗಳ ಮಟ್ಟದಲ್ಲೂ ಅಭ್ಯರ್ಥಿಗಳು ಕಚೇರಿಯನ್ನು ತೆರೆದು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಸ್ಥಳೀಯರ ಮುಖಂಡರು ಅಭ್ಯರ್ಥಿಗಳೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ. ಎರಡು ದಿನದೊಳಗೆ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಲಿದೆ’ ಎಂದು ಹೇಳಿದರು.
‘ಅಭ್ಯರ್ಥಿಗಳ ಪೈಕಿ ಇಬ್ಬರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ವಿದ್ಯಾವಂತರಾಗಿದ್ದಾರೆ. 28 ಪದವೀಧರರು, ಎಂ.ಬಿಎ 2, ಎಂಬಿಬಿಎಸ್ 1, ಬಿಇ 1, ಡಿಪ್ಲೊಮಾ 4, ಪಿಯುಸಿ 13 ಹಾಗೂ ಎಸ್ಸೆಸ್ಸೆಲ್ಸಿ ಮುಗಿಸಿರುವ 29 ಮಂದಿ ಕಣದಲ್ಲಿದ್ದಾರೆ’ ಎಂದು ತಿಳಿಸಿದರು.
‘ರಸ್ತೆ ಸೇರಿದಂತೆ ಮೂಲಸೌಕರ್ಯವಿಲ್ಲ ಎಂದು ಬೈರಿದೇವರಕೊಪ್ಪ ಮತ್ತು ರಾಜಧಾನಿ ಕಾಲೊನಿಯಲ್ಲಿ ಚುನಾವಣೆ ಬಹಿಷ್ಕರಿಸಿರುವ ಸ್ಥಳೀಯರೊಂದಿಗೆ ಪಕ್ಷದ ಮುಖಂಡರು ಮಾತುಕತೆ ನಡೆಸಿದ್ದಾರೆ. ಚುನಾವಣೆ ಬಳಿಕ ಬೇಡಿಕೆ ಈಡೇರಿಸುವ ಭರವಸೆ ನೀಡಿ ಮನವೊಲಿಸುವ ಯತ್ನ ನಡೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ‘ಪಕ್ಷದಲ್ಲಿ ಗೂಂಡಾಗಿರಿಗೆ ಅವಕಾಶವಿಲ್ಲ. ನನ್ನ ಕ್ಷೇತ್ರದ ಕೆಲ ವಾರ್ಡ್‌ಗಳ ಅಭ್ಯರ್ಥಿಗಳು ಇತರ ಪಕ್ಷಗಳ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಸುಳ್ಳಿನಿಂದ ಕೂಡಿದೆ’ ಎಂದರು.
ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ, ‘ಅವಳಿನಗರದಲ್ಲಿ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನೇತೃತ್ವದಲ್ಲಿ ನಡೆದಿರುವ 24X7 ಕುಡಿಯುವ ನೀರು ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ, ವಿಮಾನ ನಿಲ್ದಾಣ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಜನ ಬದಲಾವಣೆಯನ್ನು ಗುರುತಿಸಿ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ವಿಶ್ವಾಸವಿದೆ’ ಎಂದು ಹೇಳಿದರು.
9.45ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಜಗದೀಶ ಶೆಟ್ಟರ್ ಅವರು 10 ಸುಮಾರಿಗೆ ಬಂದರು. ಉಳಿದ ಮುಖಂಡರು ಬಂದಿದ್ದರೂ ಸಚಿವ ಮುನೇನಕೊಪ್ಪ ಬಂದಿರಲಿಲ್ಲ. ಅವರು ಬರುವಿಕೆಗಾಗಿ ಶೆಟ್ಟರ್ ಸೇರಿದಂತೆ ಎಲ್ಲರೂ ಅರ್ಧ ತಾಸು ಕಾದರು. 10.30ರ ಸುಮಾರಿಗೆ ಸಚಿವರು ಬಂದ ಬಳಿಕ, ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾ ವಕ್ತಾರ ರವಿ ನಾಯಕ, ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಮುಖಂಡರಾದ ದತ್ತಮೂರ್ತಿ ಕುಲಕರ್ಣಿ, ಚಂದ್ರಶೇಖರ ಗೋಕಾಕ, ರಂಗಾ ಬದ್ಧಿ ಇದ್ದರು.
Check Also
ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ
Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …