Breaking News

ಮುಕ್ತ ಮತ್ತು ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆಗೆ ಕ್ರಮ

Spread the love

ಧಾರವಾಡ ; ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಜರುಗುತ್ತಿದ್ದು, ಚುನಾವಣೆಗಳು ಮುಕ್ತ ಮತ್ತು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಹಾಗೂ ಶಾಂತಿಯುತವಾಗಿ ಜರುಗಲು ರಾಜ್ಯ ಚುನಾವಣಾ ಆಯೋಗ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿರುವ ಎಲ್ಲ ಹಂತದ ಅಧಿಕಾರಿಗಳು ಆಯೋಗದ ನಿರ್ದೇಶನಗಳನ್ನು ಪಾಲಿಸುವ ಮೂಲಕ ಯಶಸ್ವಿಯಾಗಿ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಡಾ.ಬಿ. ಬಸವರಾಜು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ-2021 ಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಚುನಾವಣಾಧಿಕಾರಿ, ಪೊಲೀಸ್ ಆಯುಕ್ತರು ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು, ಸಾಮಾನ್ಯ ವೀಕ್ಷಕರು ಮತ್ತು ಚುನಾವಣಾ ವಿವಿಧ ನೋಡಲ್ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿದರು.
ಚುನಾವಣೆಯನ್ನು ಮುಕ್ತವಾಗಿ ಮತ್ತು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಜರುಗಿಸುವುದು ಪ್ರತಿಯೋಬ್ಬರ ಜವಾಬ್ದಾರಿಯಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಆಯೋಗವು ಗಂಭೀರವಾಗಿ ಪರಿಗಣಿಸುತ್ತದೆ. ಚುನಾವಣಾ ಪ್ರಕ್ರಿಯೆಯು ಒಂದು ಚೈನ್ ಸಿಸ್ಟಮ್‍ದಲ್ಲಿ ನಡೆಯುತ್ತದೆ. ಮತ್ತು ಕರ್ತವ್ಯಗಳ ವಿಕೇಂದ್ರೀಕರಣವಾಗಿದ್ದು, ಪ್ರತಿಯೊಬ್ಬ ಅಧಿಕಾರಿಯೂ ತನ್ನದೇ ಆದ ಜವಾಬ್ದಾರಿ ಹೊಂದಿರುತ್ತಾನೆ ಎಂದು ಅವರು ಹೇಳಿದರು.
ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯಾದ್ಯಂತ ಗ್ರಾಮಪಂಚಾಯತ್ ಚುನಾವಣೆಗಳು ಅತ್ಯಂತ ಶಾಂತಿಯುತ ಮತ್ತು ಯಶಸ್ವಿಯಾಗಿ ಜರುಗಿದವು. ಇದಕ್ಕಾಗಿ ಆಯೋಗವು ರಾಜ್ಯದ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಅಭಿನಂದಿಸುತ್ತದೆ. ಚುನಾವಣಾ ಕಾರ್ಯದಲ್ಲಿ ತೊಡಗುವ ಎಲ್ಲ ಹಂತದ ಅಧಿಕಾರಿಗಳಿಗೆ ಉತ್ತಮವಾದ ತರಬೇತಿ ನೀಡಬೇಕು. ನೇಮಕವಾಗುವ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಗಳ ಕುರಿತು ಕೈಪಿಡಿಗಳನ್ನು ಓದಿ ತಿಳಿದುಕೊಳ್ಳಬೇಕು ಮತ್ತು ಯಾವುದೇ ಪ್ರಭಾವಗಳಿಗೆ, ಒತ್ತಡಗಳಿಗೆ ಒಳಗಾಗದೇ ನಿರ್ಭಯವಾಗಿ ಚುನಾವಣಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ, ಪರಿಶೀಲನೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳಿಂದ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯು ಹೆಚ್ಚು ಮುಂಜಾಗೃತೆ ವಹಿಸಿ ಚುನಾವಣಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಮದ್ಯಸಂಗ್ರಹ, ಮದ್ಯಸರಬರಾಜು ಮತ್ತು ಮದ್ಯಬಳಕೆಯ ಕುರಿತು ಪ್ರತಿದಿನ ಮಾಹಿತಿ ಪಡೆದು ಪರಿಶೀಲಿಸಬೇಕು. ಅಕ್ರಮಗಳ ಬಗ್ಗೆ ಸುಳಿವು ಸಿಕ್ಕರೆ ತಕ್ಷಣ ದಾಳಿ ಮಾಡಿ ವಶಪಡಿಸಿಕೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಹೇಳಿದರು.
ಪ್ರಸಕ್ತ ಚುನಾವಣೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಚುನಾವಣಾ ಆಯೋಗವು ಸೂಚಿಸಿ, ಕೋವಿಡ್ ಕುರಿತ ಎಸ್‍ಓಪಿ (SOP) ಯನ್ನು ನೀಡಿದೆ. ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮತ್ತು ಅಭ್ಯರ್ಥಿಯ ಪ್ರಚಾರಕ್ಕಾಗಿ ಯಾವುದೇ ರೀತಿಯ ಗುಂಪು ಸೇರುವುದು, ಮೆರವಣಿಗೆ, ವಾಹನ ಬಳಕೆ, ರ್ಯಾಲಿ, ಸಾರ್ವಜನಿಕ ಸಭೆ ಮುಂತಾದವುಗಳ ಆಯೋಜನೆಯನ್ನು ನಿರ್ಬಂಧಿಸಲಾಗಿದೆ. ವಿದ್ಯುನ್ಮಾನ್, ಸಾಮಾಜಿಕ ಜಾಲತಾಣ ಹಾಗೂ ಮದ್ರಣ ಮಾದ್ಯಮ ಸೇರಿದಂತೆ ಕರಪತ್ರ, ಪೋಸ್ಟರ್ ಇತ್ಯಾದಿ ಮಾದ್ಯಮ ಮತ್ತು ಪ್ರಚಾರ ಸಾಮಾಗ್ರಿಗಳ ಬಳಕೆಗೆ ಅನುಮತಿ ನೀಡಲಾಗಿದೆ. ಅಭ್ಯರ್ಥಿಗೆ ರೂ.3,00,000/- ಗಳವರೆಗೆ ವೆಚ್ಚ ಮಾಡಲು ಅನುಮತಿಸಲಾಗಿದ್ದು, ಪ್ರತಿದಿನ ವೆಚ್ಚದ ವಿವರಗಳನ್ನು ಅಭ್ಯರ್ಥಿಗಳು ಸಂಬಂಧಿಸಿದ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದರು.
ಮಹಾನಗರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿ ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ. ಬಿ. ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಮತ್ತು ವಿಶೇಷ ಭೂಸ್ವಾದೀನಾಧಿಕಾರಿ ವಿದ್ಯಾಧರ ಗುಳಗುಳಿ ಅವರನ್ನು ವಿದ್ಯುನ್ಮಾನ ಮತಯಂತ್ರಗಳ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ್ ಅವರನ್ನು ತರಬೇತಿ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 403497 ಪುರುಷ, 407954 ಮಹಿಳಾ ಮತ್ತು ಇತರೆ 86 ಸೇರಿದಂತೆ ಒಟ್ಟು 811537 ಮತದಾರರು ಮತದಾನ ಮಾಡಲಿದ್ದಾರೆ. 82 ವಾರ್ಡ್ ವ್ಯಾಪ್ತಿಯಲ್ಲಿ 5 ಹೆಚ್ಚುವರಿ ಮತಗಟ್ಟೆಗಳು ಸೇರಿ ಒಟ್ಟು 842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತ್ತು 4,210 ಜನ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಗಳು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆಯ ಚುನಾವಣೆಗಾಗಿ 18 ಜನ ಚುನಾವಣಾ ಅಧಿಕಾರಿಗಳನ್ನು ಮತ್ತು 18 ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ 10 ವಾರ್ಡ್‍ಗೆ ಒಬ್ಬರಂತೆ ಅಧಿಕಾರಿಯನ್ನು ನೇಮಿಸಿ ಮಾದರಿ ನೀತಿ ಸಂಹಿತೆ ಅನುಷ್ಠಾನದ ಕುರಿತು ನಿಗಾವಹಿಸಿ ಪರಿಶೀಲಿಸಲಾಗುತ್ತಿದೆ. 63 ಜನ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಹಾನಗರ ಪಾಲಿಕೆಯ 82 ವಾರ್ಡ್‍ಗಳಿಗೆ ಸ್ಪರ್ಧೆ ಬಯಸಿ 569 ನಾಮಪತ್ರಗಳ ಸಲ್ಲಿಕೆಯಾಗಿದ್ದು, ನಿನ್ನೆಯ ದಿನ ಜರುಗಿದ ನಾಮಪತ್ರಗಳ ಪರಿಶೀಲನೆಯಲ್ಲಿ 47 ನಾಮಪತ್ರಗಳು ತಿರಸ್ಕøತವಾಗಿದ್ದು, ಒಟ್ಟು 486 ಜನ ಕ್ರಮಬದ್ಧ ನಾಮನಿರ್ದೇಶಿತ ಅಭ್ಯರ್ಥಿಗಳು ಉಳಿದಿದ್ದಾರೆ. ಮತ್ತು ಇಂದು ಹಾಗೂ ನಾಳೆ (ಆ.25, 26) ತಮ್ಮ ಉಮೇದುವಾರಿಕೆ ಹಿಂಪಡೆಯಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಹಾನಗರ ಪಾಲಿಕೆ ಚುನಾವಣೆಯನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆಯುಕ್ತರಿಗೆ ತಿಳಿಸಿದರು.
ಸಭೆಯಲ್ಲಿ ಮಹಾನಗರ ಪೆÇಲೀಸ್ ಆಯುಕ್ತ ಲಾಬೂರಾಮ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮಾಧವ ಗಿತ್ತೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಉಪವಿಭಾಗಾಧಿಕಾರಿ ಹಾಗೂ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಡಾ.ಗೋಪಾಲಕೃಷ್ಣ.ಬಿ., ಸಾಮಾನ್ಯ ವೀಕ್ಷಕ ಷಣ್ಮುಖಪ್ಪ ಡಿ., ಆಹಾರ ಇಲಾಖೆಯ ಜಂಟಿನಿರ್ದೇಶಕ ವಿನಾಯಕ ಪಾಲನಕರ, ಭೂ ದಾಖಲೆಗಳ ಉಪನಿರ್ದೇಶಕ ವಿಜಯಕುಮಾರ .ಎ.ಪಿ., ಎನ್‍ಐಸಿ ಅಧಿಕಾರಿ ಮೀನಾಕುಮಾರಿ ಎಂ., ಹಾಗೂ ವೆಚ್ಚ ನಿರ್ವಹಣಾ ನೋಡಲ್ ಅಧಿಕಾರಿ ವರದರಾಜ್, ಅಬಕಾರಿ ಇಲಾಖೆಯ ಅಧಿಕಾರಿ ಆತ್ಮಲಿಂಗ ಮಠಪತಿ ಸೇರಿದಂತೆ ಇತರರು ಭಾಗವಹಿಸಿದ್ದರು.


Spread the love

About Karnataka Junction

    Check Also

    ಅಹಿಂದ ಮಾಡಿದಾಗ ಸಿದ್ಧರಾಮಯ್ಯಾ ಜೊತೆಗೆ ನಿಂತವನು ನಾನೋಬ್ಬನೇ- ಬೊಮ್ಮಾಯಿ

    Spread the loveಹುಬ್ಬಳ್ಳಿ:ಸಿದ್ದರಾಮಯ್ಯ ಅವರು ಅಹಿಂದ ಮಾಡಿದಾಗ ಅವರ ಜೊತೆಗೆ ಬಹಿರಂಗವಾಗಿ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. …

    Leave a Reply

    error: Content is protected !!