ಹುಬ್ಬಳ್ಳಿ: ಜನಾಶೀರ್ವಾದ ಯಾತ್ರೆಯಲ್ಲಿ ಯಾವುದೇ ಸಂದೇಶ ಇಲ್ಲ. ಗುಂಡು ಹಾರಿಸಿ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ. ಹಾರ ತುರಾಯಿ ಹಾಕಿಕೊಂಡು ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೊರೊನಾ ನಿಯಮ ಕೂಡಾ ವ್ಯಾಪಕವಾಗಿ ಉಲ್ಲಂಘಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರಿಂದಲೂ ಸಭೆ, ಸಮಾರಂಭಗಳಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ. ರಾಜಕೀಯ ನಾಯಕರಾದ ನಾವೇ ನಿಯಮ ಉಲ್ಲಂಘಿಸುತ್ತಿದ್ದೇವೆ ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಮಾತನಾಡಿದ ಅವರು,
ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಗ್ರಹಿಸಿ ಆಲಮಟ್ಟಿಯಿಂದ, ಮಹದಾಯಿ ಯೋಜನೆಗಾಗಿ ಬೆಳಗಾವಿಯಿಂದ ಪಾದಯಾತ್ರೆ ಮಾಡುತ್ತೇವೆ. ಎತ್ತಿನಹೊಳೆ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ. ಕೇಂದ್ರದ ಕಣ್ಣು ತೆರೆಸಲು ಪಾದಯಾತ್ರೆ ಮಾಡುತ್ತೇವೆ. ಕೊರೊನಾ ಕಡಿಮೆಯಾದರೆ ಇದೇ ವಿಜಯದಶಮಿಯಿಂದ ನಮ್ಮ ಹೋರಾಟ ಆರಂಭವಾಗುತ್ತದೆ ಎಂದು ಹೇಳಿದರು.
14 ತಿಂಗಳಲ್ಲಿ ಉತ್ತರ ಕರ್ನಾಟಕಕ್ಕೆ ನಾನೇನು ಮಾಡಿದ್ದೆ. ಈ ಭಾಗದ ನಾಯಕರು ಏನು ಮಾಡಿದ್ದಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಲಿ. ಜೆಡಿಎಸ್ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿ ವರ್ಕ್ಶಾಪ್ ಮಾಡುತ್ತೇವೆ. ಹಳ್ಳಿಹಳ್ಳಿಗೂ ಹೋಗಿ ಶಕ್ತಿ ತುಂಬುತ್ತೇವೆ. ಸಿದ್ದರಾಮಯ್ಯನವರಿಗೆ ಜೆಡಿಎಸ್ ಮುಗಿಸುವುದೇ ಕೆಲಸ. ಅವರು ಯಾವತ್ತೂ ಜನತಾ ಪರಿವಾರ ಅಂತ ಹೆಳಲೇ ಇಲ್ಲ. ಸಿಎಂ ಬೊಮ್ಮಾಯಿಯವರಲ್ಲಿ ಇನ್ನೂ ಸ್ವಲ್ಪ ಭಾವನೆ ಇದೆ. ಕಾಂಗ್ರೆಸ್ ಪರವಾಗಿ ನನ್ನ ನಿಲುವಿಲ್ಲ ಅಂತ ಹೆಚ್ಡಿಕೆ ಅಭಿಪ್ರಾಯಪಟ್ಟರು.
ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಎಲೆಕ್ಷನ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ, 65-70 ವಾಡ್೯ಗಳಿಗೆ ಅಭ್ಯರ್ಥಿಗಳನ್ನ ಹಾಕುತ್ತೇವೆ. ಹಲವಾರು ವಿದ್ಯಾವಂತರಿಗೆ ಟಿಕೆಟ್ ನೀಡಿದ್ದೇವೆ. ಕಲಬುರಗಿಯಲ್ಲೂ ಎಲ್ಲಾ ವಾಡ್೯ಗಳಿಗೂ ಅಭ್ಯರ್ಥಿಗಳನ್ನ ಹಾಕುತ್ತೇವೆ. ಆದರೆ ಬೆಳಗಾವಿಯಲ್ಲಿ ನಮಗೆ ಸ್ವಲ್ಪ ಹಿನ್ನಡೆಯಿದೆ ಅಂತ ಅಭಿಪ್ರಾಯಪಟ್ಟರು. ಮಾಜಿ ಶಾಸಕ ಕೊನರೆಡ್ಡಿ, ಗುರುರಾಜ ಹುಣಸಿಮರದ ಮುಂತಾದವರಿದ್ದರು
