ಹುಬ್ಬಳ್ಳಿ: ಇಲ್ಲಿಯ ರಾಮಲಿಂಗೇಶ್ವರ ನಗರದಲ್ಲಿ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಮಗುವನ್ನು ಗೋಕುಲ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಶಬನಂ ಗದಗಕರ ಬಂಧಿತ ಯುವತಿ. ಶನಿವಾರ ಮಧ್ಯಾಹ್ನ ಪಕ್ಕದ ಮನೆಯ ಅಸ್ಲಾಂ ಬಳ್ಳಾರಿ ಅವರ ಮಗುವನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ನಾಪತ್ತೆಯಾಗಿದ್ದಳು. ಅಸ್ಲಾಂ ಅವರು ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಕ್ಷಣ ತನಿಖೆ ಕೈಗೊಂಡ ಪೊಲೀಸರಿಗೆ, ಮೊಬೈಲ್ ಟವರ್ ಆಧಾರದಲ್ಲಿ ಆರೋಪಿ ಬೆಂಗಳೂರಿನಲ್ಲಿ ಇರುವುದು ತಿಳಿದು ಬಂತು.
ವಿಶೇಷ ತಂಡ ರಚಿಸಿ ಮಾಹಿತಿ ಸಂಗ್ರಹಿಸಿದ ಪೊಲೀಸರಿಗೆ, ಶಬನಂ ಬೆಂಗಳೂರಿನ ಯುವಕನನ್ನು ಮದುವೆಯಾಗಿ, ವಿಚ್ಛೇದನ ಪಡೆದು ಮಂಡ್ಯದ ವ್ಯಕ್ತಿಯ ಜೊತೆ ಸ್ನೇಹದಲ್ಲಿರುವುದು ತಿಳಿದು ಬಂದಿತ್ತು. ಶಬನಂ ಮಗುವಿನ ಜೊತೆ ಅವನಲ್ಲಿಗೆ ತೆರಳುತ್ತಿರುವ ಮಾಹಿತಿ ಆಧರಿಸಿ, ಪೊಲೀಸರು ಅವನನ್ನು ಸಂಪರ್ಕಿಸಿ ಸಹಕಾರ ಕೋರಿದ್ದರು. ಆಗ, ಅವನು ಶಬನಂಗೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಆರನೇ ಪ್ಲಾಟ್ ಫಾರ್ಮ್ ನಲ್ಲಿ ಇರಲು ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದ.
ಅದೇ ವೇಳೆ ಕಮಿಷನರ್ ಲಾಬೂರಾಮ್, ಬೆಂಗಳೂರಿನ ಚಿಕ್ಕಪೇಟೆ ಎಸಿಪಿ ಹಾಗೂ ಉಪ್ಪಾರಪೇಟೆ ಪೊಲೀಸ್ ಸಿಬ್ಬಂದಿ ಸಹಾಯ ಕೇಳಿ, ಮಗು ಹಾಗೂ ಆರೋಪಿ ಫೋಟೊವನ್ನು ಅವರ ವಾಟ್ಸ್’ಆ್ಯಪ್’ಗೆ ಕಳುಹಿಸಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಬೆಂಗಳೂರು ಪೊಲೀಸರು ಮಗುವನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ ಬೆಂಗಳೂರಿಗೆ ತೆರಳಿದ ಗೋಕುಲ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಮಗುವನ್ನು ಹುಬ್ಬಳ್ಳಿಗೆ ಕರೆತಂದಿದ್ದಾರೆ.
ಮಗುವನ್ನು ಯುವತಿ ಅಪಹರಣ ಮಾಡಿದ್ದು ಯಾಕೆ, ಅವಳು ಅದೇ ಕೃತ್ಯದಲ್ಲಿಯೇ ಭಾಗಿಯಾಗಿರುವ ಆರೋಪಿಯೇ ಎನ್ನುವ ಕುರಿತು ತನಿಖೆ ನಡೆಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.