ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ (76) ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ಇಂದು ಅವರ ಬೆಂಗಳೂರು ನಿವಾಸದಲ್ಲಿ ಇನ್ಜಿಲ್ಲವಾಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಯಂತಿಯವರಿಗೆ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಅಮ್ಮ ಬನಶಂಕರಿಯ ನಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ಇನ್ನೊಂದು ಗಂಟೆಯಲ್ಲಿ ಅಂತಿಮ ವಿಧಿವಿಧಾನ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಜಯಂತಿ ಪುತ್ರ ಕೃಷ್ಣ ಕುಮಾರ್ ಮಾಹಿತಿ ನೀಡಿದ್ದಾರೆ.1945 ಜನವರಿ 6 ರಂದು ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿಯವರು ಕನ್ನಡ, ತೆಲುಗು, ತಮಿಳು, ಮರಾಠಿ, ಹಿಂದಿ ಮತ್ತು ಮಲಯಾಳಂ ಭಾಷೆಯ ಒಟ್ಟು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾ. ರಾಜ್ಕುಮಾರ್ ಜತೆಯಲ್ಲಿ 45 ಚಿತ್ರಗಳಲ್ಲಿ ಅಭಿನಯಿಸಿದ್ದರು. ಎಡಕಲ್ಲು ಗುಡ್ಡದ ಮೇಲೆ ಇವರ ಪ್ರಸಿದ್ಧ ಚಿತ್ರವಾಗಿದೆ.
