ಹುಬ್ಬಳ್ಳಿ; ನಿರಂತರ ಸುರಿಯುತ್ತಿರುವ ಮಳೆಯಿಂದ ವಾಹನ ಸಂಚಾರಕ್ಕೆ ವ್ಯತ್ಯಯವಾಗಿದ್ದು ಸುರಕ್ಷತೆಯ ದೃಷ್ಟಿಯಿಂದ ಕೆಲ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಕಳೆದ ಕೆಲದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಹಲವು ಪ್ರದೇಶಗಳು ದ್ವೀಪಗಳಂತಾಗಿವೆ. ಅನೇಕ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಹಲವೆಡೆ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಮಲೆನಾಡು ಭಾಗದಲ್ಲಿ ಮುಖ್ಯರಸ್ತೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಬಸ್ ಸೇರಿದಂತೆ ವಾಹನ ಸಂಚಾರಕ್ಕೆ ತೀವ್ರ ಅಡೆ ತಡೆಯಾಗಿದೆ. ಮತ್ತಷ್ಟು ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಸುರಕ್ಷತೆಯ ದೃಷ್ಡಿಯಿಂದ ಆ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯಲ್ಲಿ
ಹುಬ್ಬಳ್ಳಿ ತಾಲೂಕಿನಲ್ಲಿ ಬೆಳಗಲಿ – ವೀರಾಪುರ ಮಾರ್ಗದಲ್ಲಿ ಸಂಚರಿಸುವ ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ.
ನವಲಗುಂದ ತಾಲೂಕಿನಲ್ಲಿ ನವಲಗುಂದ – ನಲವಡಿ, ನವಲಗುಂದ – ಶಿರಕೋಳ, ಹುಬ್ಬಳ್ಳಿ- ಅಳಗವಾಡಿ ಮತ್ತು ಮಣಕವಾಡ – ಶಿಶುವಿನಹಳ್ಳಿ ಮಾರ್ಗಗಳಲ್ಲಿ ಅಣ್ಣಿಗೇರಿ ತಾಲೂಕಿನಲ್ಲಿ ನವಲಗುಂದ – ತುಪ್ಪದಕುರಹಟ್ಟಿ ಮಾರ್ಗದಲ್ಲಿ ಕಲಘಟಗಿ ತಾಲೂಕಿನಲ್ಲಿ ಹುಬ್ಬಳ್ಳಿ- ಹುಲಕೊಪ್ಪ ಮತ್ತು ಹುಬ್ಬಳ್ಳಿ – ತಬಕದಹೊನ್ನಳ್ಳಿ ಮಾರ್ಗದಲ್ಲಿ ಮತ್ತು ಕುಂದಗೋಳ ತಾಲ್ಲೂಕಿನ ಕುಂದಗೋಳ – ಯರಗುಪ್ಪಿ ಹಾಗೂ ಕೊಡ್ಲಿವಾಡ – ಗುಂಜಳ ಮತ್ತಿತರ ಮಾರ್ಗಗಳಲ್ಲಿ ಸಧ್ಯಕ್ಕೆ ಬಸ್ ಗಳ ಸಂಚಾವನ್ನು ಸ್ಥಗಿತಗೊಳಿಸಲಾಗಿದೆ.
ಕೊಲ್ಲಾಪುರ- ನಿಪ್ಪಾಣಿ ನಡುವೆ ಕೋಗನೋಳಿ ಟೋಲ್ ಗೇಟ್ ಬಳಿ ಸೇತುವೆ ಮೇಲೆ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ.ಎಲ್ಲಾ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಹೀಗಾಗಿ ಪಿಂಪ್ರಿಯಿಂದ ಹುಬ್ಬಳ್ಳಿಗೆ ಬರಬೇಕಾಗಿದ್ದ ಸ್ಲೀಪರ ಬಸ್ ಸೇರಿದಂತೆ ಮಹಾರಾಷ್ಟ್ರ ದಿಂದ ಕರ್ನಾಟಕಕ್ಕೆ ಬರುವ ಹಲವಾರು ವಾಹನಗಳು ಅಲ್ಲೀಯೆ ಸಿಲುಕಿಕೊಂಡಿವೆ. ಸಧ್ಯಕ್ಕೆ ಹುಬ್ಬಳ್ಳಿಯಿಂದ ಕೊಲ್ಲಾಪುರ ಕಡೆಗೆ ಬಸ್ ಸಂಚಾರ ರದ್ದುಗೊಳಿಸಲಾಗಿದೆ.
ಕಾರವಾರ ರಸ್ತೆಯಲ್ಲಿ
ಯಲ್ಲಾಪುರ- ಅಂಕೋಲಾ ನಡುವೆ ಅರಬೈಲ್ ಘಾಟ್ ನಲ್ಲಿ, ಶಿರಸಿ- ಕುಮಟಾ ನಡುವೆ ಕತಗಾಲ ಬಳಿ ಮತ್ತು ಶಿರಸಿ-ಜೋಗ ರಸ್ತೆಯಲ್ಲಿ ಶಿರಸಿ-ಸಿದ್ದಾಪುರ ನಡುವೆ ಅಲ್ಲಲ್ಲಿ ಪದೆ ಪದೆ ಗುಡ್ಡ ಕುಸಿದು ಬಸ್ ಸಂಚಾರಕ್ಕೆ ವ್ಯತ್ಯಯವಾಗಿದೆ.
ಬೆಳಗಾವಿ,ಧಾರವಾಡ, ಉತ್ತರ ಕನ್ನಡ,ಹಾವೇರಿ ಮುಂತಾದ ನೆರೆಯ
ಜಿಲ್ಲೆಗಳ ಹಲವಾರು ಸ್ಥಳಗಳು ಸೇರಿದಂತೆ ದೂರದ ಊರುಗಳಿಗೆ ತೆರಳುವ ಬಸ್ ಗಳನ್ನು ಆಯಾ ಪ್ರದೇಶಗಳಲ್ಲಿನ ಪರಿಸ್ಥಿತಿ ನೋಡಿಕೊಂಡು ಕಾರ್ಯಾಚರಣೆ ಮಾಡಲಾಗುತ್ತದೆ.
ಬಸ್ ಕಾರ್ಯಾಚರಣೆ ಇರುವಂತಹ ಮಾರ್ಗಗಳಲ್ಲಿ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಸುರಕ್ಷಿತವಾಗಿ ಚಾಲನೆ ಮಾಡುವ ಬಗ್ಗೆ ಚಾಲಕರಿಗೆ ಸೂಚನೆಗಳನ್ನು ನೀಡಲಾಗಿದೆ.
ಮಾರ್ಗ ಮಧ್ಯದಲ್ಲಿ
ರಸ್ತೆ ಮೇಲೆ ನೀರು ಹರಿಯುತ್ತಿರವಾಗ ಯಾವುದೇ ಕಾರಣಕ್ಕೂ ಬಸ್ ಚಾಲನೆ ಮಾಡುವ ದುಸ್ಸಾಹಸ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ನಾಳೆಯೂ ಸಹ ಧಾರಾಕಾರ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮುಂದಿನ ನಾಲ್ಕಾರು ದಿನಗಳಲ್ಲಿ ವಿಧಾನವಾಗಿ ಕಡಿಮೆಯಾಗಲಿದೆ.
ಮಳೆ ಕಡಿಮೆಯಾದ ನಂತರದಲ್ಲಿ ರಸ್ತೆ ಸ್ಥಿತಿಗತಿ ನೋಡಿಕೊಂಡು ಬಸ್ ಸಂಚಾರ ಮರು ಪ್ರಾರಂಭಿಸಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
Check Also
ಆಕಾಶ್ ನಿಂದ (ಎಇಎಸ್ ಎಲ್) ನ ಅಂತೆ 2024 ಪರೀಕ್ಷೆ ಘೋಷಣೆ
Spread the loveಹುಬ್ಬಳ್ಳಿ : ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ (AESL) ತನ್ನ ಮಹತ್ವಾಕಾಂಕ್ಷೆಯ ವಿದ್ಯಾರ್ಥಿವೇತನ ಪರೀಕ್ಷೆಯಾದ ಆಕಾಶ್ ನ್ಯಾಷನಲ್ …