ಹುಬ್ಬಳ್ಳಿ: ಭ್ರಷ್ಟಾಚಾರದ ಗಂಗ್ರೋತಿ ಅಂದರೆ ಭಾರತೀಯ ಜನತಾ ಪಾರ್ಟಿ. ರಫೆಲ್ ಯುದ್ಧ ವಿಮಾನ ಖರೀದಿಯಯಲ್ಲಿ ಭ್ರಷ್ಟಾಚಾರವಾಗಿಲ್ಲ ಎಂದಿದ್ದರು.
ಆದರೆ ಸದ್ಯ ಫ್ರಾನ್ಸ್ ಸರಕಾರ ನ್ಯಾಯಂಗ ತನಿಖೆಗೆ ಆದೇಶ ಮಾಡಿದೆ. ನಾಚಿಕೆಯಾಗಬೇಕು ಇವರಿಗೆ ಎಂದು ಬಿಜೆಪಿ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಹರಿಹಾಯ್ದರು.
ನಗರದಲ್ಲಿ ಮಾಧ್ಯಮದವರ ಜತೆ ಮಂಗಳವಾರ ಮಾತನಾಡಿದ ಅವರು, ಭ್ರಷ್ಟಾಚಾರ ವನ್ನು ಅದೇ ಪಕ್ಷದವರೇ ಬಯಲಿಗೆ ಎಳೆಯುತ್ತಿದ್ದಾರೆ. ಜನರು ಗಮನಿಸುತ್ತಿದ್ದಾರೆ ಎಂದರು.
ರಫೆಲ್ ಯುದ್ದ ವಿಮಾನ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು
ಪಕ್ಷದ ನಾಯಕ ರಾಹುಲ್ ಗಾಂಧಿಯವರು ದಾಖಲೆ ಸಮೇತ ಹೊರಹಾಕಿದ್ದಾರೆ. ಇದಲ್ಲದೇ ಜಂಟಿ ಸದನ ಸಮಿತಿ ರಚಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದರು ಎಂದು ನೆನಪಿಸಿದರು.
ಅಚ್ಛೆ ದಿನ್ ಬರುತ್ತದೆ ಎಂದು ಪ್ರಧಾನಿ ಮೋದಿಸೇರಿದಂತೆ ಬಿಜೆಪಿಯವರು ಘಂಟಾಘೋಷವಾಗಿ ಹೇಳುತ್ತಲೇ ಜನರನ್ನು ಮರಳು ಮಾಡಿದರು. ಪ್ರಸ್ತುತ ಏನಾಗಿದೆ, ಪೆಟ್ರೋಲ್ ಎರಡನೇ ಶತಕದತ್ತ, ಡಿಸೇಲ್ ಶತಕ ಸಮೀಪಿಸಿದ. ಯುಪಿಎ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ 5 ರೂ ಏರಿಕೆಯಾದರೇ ಬಿಜೆಪಿ ಮಹಿಳಾ ಸಂಸದೆಯರು ತಲೆ ಮೇಲೆ ಸಿಲಿಂಡರ್ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಇವಾಗ ಅವರೆಲ್ಲ ಎಲ್ಲಿದ್ದಾರೆಎಂದು ಲೇವಡಿ ಮಾಡಿದರು.
ಶಾಸಕ ಬಸನಗೌಡ ಯತ್ನಾಳ ಪಾಟೀಲ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಗೊಂದಲ ಇದೆ. ಅದಕ್ಕೆ ಯತ್ನಾಳ್ ಮಾತನಾಡುತ್ತಾರೆ. ಅವರ ನಾಯಕರ ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಪ್ರತಿಪಕ್ಷವಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಧ್ವನಿ ಎತ್ತಿರುವ ಸಿಎಂ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರು ಈಗಲೇ ಸಿಎಂ ಆಗುವ ಬಗ್ಗೆ ಮಾತನಾಡುವುದು ತಪ್ಪು. ಎಲೆಕ್ಷನ್ ಆಗಿ ಬಹುಮತ ಬಂದು ಶಾಸಕಾಂಗ ಸಭೆಯಲ್ಲಿ ತೀರ್ಮಾನ ಆಗುತ್ತದೆ. ತಮ್ಮ ತಮ್ಮ ನಾಯಕರ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ವಿನಃ ಅದು ಬಣವಲ್ಲ ಎಂದು ಹೇಳಿದರು.
