https://youtu.be/r49w3Rp4CZE
ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಗೆ ಭೂಮಿಕೆ ಸಿದ್ಧವಾಗುತ್ತಿದ್ದು, ಅವಳಿನಗರದ ಮತದಾರರ ಕರಡು ಪಟ್ಟಿಯನ್ನು ಜೂನ್ 28ರಂದು ಪಾಲಿಕೆ ಪ್ರಕಟಿಸಲಿದೆ. ಪಟ್ಟಿಗೆ ಸಂಬಂಧಿಸಿದಂತೆ ನಾಗರಿಕರು ಜುಲೈ 1ರೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ವಾರ್ಡ್‌ವಾರು ತಯಾರಾಗಿರುವ ಈ ಪಟ್ಟಿಯು ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ಪಾಲಿಕೆಯ ಎಲ್ಲಾ ಕಚೇರಿಗಳ ಜತೆಗೆ ಜಿಲ್ಲಾಡಳಿತ ಮತ್ತು ಪಾಲಿಕೆಯ ವೆಬ್‌ಸೈಟ್‌ನಲ್ಲೂ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ಇರಲಿದೆ. ಮತಗಟ್ಟೆಗಳ ಮಟ್ಟದಲ್ಲಿ ಪಟ್ಟಿ ಕುರಿತು ಪ್ರಚಾರ ನಡೆಯಲಿದೆ.
ಜುಲೈ 2ರಿಂದ 5ರವರೆಗೆ ಪಟ್ಟಿ ಕುರಿತು ಬಂದ ಆಕ್ಷೇಪಣೆಗಳ ಇತ್ಯರ್ಥವಾಗಲಿದೆ. ಜು. 6ರಿಂದ 7ರವರೆಗೆ ಪಟ್ಟಿಯ ಮುದ್ರಣದಲ್ಲಿ ಬದಲಾವಣೆಯೊಂದಿಗೆ ಚೆಕ್‌ಲಿಸ್ಟ್ ಪಡೆದು, ವಾರ್ಡ್ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಯಲಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಪಾಲಿಕೆ ಅಧಿಕಾರಿಗಳು ಸಭೆ ನಡೆಸಿ, ಅವರಿಗೆ ಪಟ್ಟಿ ಪ್ರತಿಯನ್ನು ನೀಡಿ ಮಾಹಿತಿ ನೀಡಲಿದ್ದಾರೆ. ಇದಾದ ಬಳಿಕ, ಜು. 9ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಹೊಸ ಸೇರ್ಪಡೆಗೆ ಅವಕಾಶವಿಲ್ಲ: ‘ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ಮೃತಪಟ್ಟವರನ್ನು ಪಟ್ಟಿಯಿಂದ ಕೈಬಿಡುವಂತಹ ಪರಿಷ್ಕರಣೆ ಕೆಲಸಗಳು ಏ. 4ರ ತನಕ ನಿರಂತವಾಗಿ ನಡೆದಿವೆ. ಕರಡು ಪಟ್ಟಿ ಪ್ರಕಟವಾದ ಬಳಿಕ ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶ ಇರುವುದಿಲ್ಲ. ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ವಾರ್ಡ್‌ವಾರು ಇರುವ ಮತದಾರರ ಹೆಸರುಗಳು ಈ ಪಟ್ಟಿಯಲ್ಲಿವೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.
‘ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್‌ವಾರು ಪಟ್ಟಿಯನ್ನು ತಾಳೆ ಮಾಡಿ, ಕರಡು ಪಟ್ಟಿ ಸಿದ್ಧಪಡಿಸಲಾಗಿದೆ. ಎರಡರಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಆದರೂ, ಪಟ್ಟಿಯಲ್ಲಿ ದೋಷ ಕಂಡುಬಂದರೆ ನಾಗರಿಕರು ಆಕ್ಷೇಪಣೆ ಸಲ್ಲಿಸಬಹುದು. ಅದನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಿ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು’ ಎಂದು ಹೇಳಿದರು.
ಚುನಾವಣಾ ಆಯೋಗದ ಸೂಚನೆಯಂತೆ, ಈಗಾಗಲೇ ವಾರ್ಡ್‌ಗಳ ಮರು ವಿಂಗಡಣೆ ಮಾಡಿ, ವಾರ್ಡ್‌ವಾರು ಮೀಸಲಾತಿಯನ್ನೂ ಘೋಷಿಸಲಾಗಿದೆ. ಮತದಾರರ ಕರಡು ಪಟ್ಟಿ ಸೋಮವಾರ ಪ್ರಕಟವಾಗಲಿದೆ. ಅಂತಿಮ ಪಟ್ಟಿ ಪ್ರಕಟವಾದ 45 ದಿನದೊಳಗೆ ಚುನಾವಣೆ ಘೋಷಿಸುವಂತೆ ಹೈಕೋರ್ಟ್ ಈಗಾಗಲೇ ಸೂಚನೆ ನೀಡಿದೆ. ಹಾಗಾಗಿ ಇನ್ನೆರಡು ತಿಂಗಳಲ್ಲಿ ಪಾಲಿಕೆ ಚುನಾವಣೆ ನಡೆಯುವುದು ಖಚಿತವಾಗಿದೆ.