ಹುಬ್ಬಳ್ಳಿ: ಗಾಂಜಾ ಹಾಗೂ ಕಳವು ಪ್ರಕರಣದ 23 ವರ್ಷದ ಆರೋಪಿ ಮಹಾಂತೇಶ ಪತ್ತಾರ ಬಡ ಕುಟುಂಬದ ಹುಡುಗ. ಗಾಂಜಾ ಸೇವಿಸದಿದ್ದರೆ ಬದುಕಲಾರೆ ಎನ್ನುವ ಮನಸ್ಥಿತಿ ಅವನದ್ದು. ಅವನ ಕಿರಿಕಿರಿ ಸಹಿಸದ ಕುಟುಂಬದವರು ನೋಡಲು ಒಮ್ಮೆಯೂ ಜೈಲಿಗೆ ಬಂದಿಲ್ಲ. ಹೊರಗೆ ಬಿಡುತ್ತೇವೆ ಎಂದರೂ ಬೇಡ ಎನ್ನುತ್ತಿದ್ದಾರೆ.
ನಗರದ ಉಪ ಕಾರಾಗೃಹದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನ ಕಾರ್ಯಕ್ರಮದಲ್ಲಿ, ಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ಮಾದಕ ವಸ್ತುಗಳ ಪರಿಣಾಮದ ಕುರಿತು ಆರೋಪಿ ಮಹಾಂತೇಶನ ಒಪ್ಪಿಗೆ ಮೇರೆಗೆ ಆ ಹುಡುಗನ ನಿದರ್ಶನ ಮುಂದಿಟ್ಟು ಮಾತನಾಡಿದರು.
ಮಹಾಂತೇಶನಿಗೆ ಅಣ್ಣ, ಅಪ್ಪ–ಅಮ್ಮ ಇದ್ದಾರೆ. ಸಹವಾಸ ದೋಷದಿಂದ ದುಶ್ಚಟ ಕಲಿತಿದ್ದ. ಬೈಕ್‌ಗಳನ್ನು ಕಳವು ಮಾಡಿ, ಪೆಟ್ರೋಲ್ ಖಾಲಿಯಾಗುವವರೆಗೆ ಓಡಿಸಿ ಅಲ್ಲೇ ಬಿಟ್ಟು ಮರಳಿ ಬರುತ್ತಿದ್ದ. ಗಾಂಜಾ ಸಿಕ್ಕಿಲ್ಲವೆಂದು ಬೀಡಿ ಸೇದಲು ಮುಂದಾದ. ಅದೂ ಸಿಕ್ಕಿಲ್ಲ ಎಂದಾಗ, ಸೇದಿ ಬಿಸಾಡಿದ ಬೀಡಿ ತುದಿಗೆ ಅಥವಾ ಒಣಗಿದ ಎಲೆಗೆ ಬೆಂಕಿ ಹಚ್ಚಿ ಅದರ ಹೊಗೆ ಸೇದುತ್ತಿದ್ದ.
ಕಿಮ್ಸ್, ಡಿಮ್ಹಾನ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು; ಸಮಾಲೋಚನೆಗೂ ಒಳಪಡಿಸಲಾಯಿತು. ಸರಿಪಡಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಾಯಿತು. ಆದರೂ ಗುಣಮುಖನಾಗಲಿಲ್ಲ. ಅವನನ್ನು ಬಿಡುಗಡೆ ಮಾಡುತ್ತೇವೆ ಎಂದರೂ ಕುಟುಂಬದವರು ಬೇಡ ಅಲ್ಲೇ ಇರಲಿ ಎನ್ನುತ್ತಾರೆ. ಜೈಲಿಗೆ ಬಂದು ಎರಡು ವರ್ಷಗಳಾದರೂ ಒಮ್ಮೆಯೂ ಕುಟುಂಬದವರು ನೋಡಲು ಬಂದಿಲ್ಲ. ಇಲ್ಲೇ ಇರುವ ಕೈದಿಯೊಬ್ಬ ಅವನನ್ನು ಮಗುವಿನ ಹಾಗೆ ನೋಡಿಕೊಳ್ಳುತ್ತಿದ್ದಾನೆ. ವ್ಯಸನ ಎಲ್ಲ ಸಂಬಂಧವನ್ನು ಮರೆಸಿ, ಬದುಕೇ ವ್ಯರ್ಥವಾಗಿಸಿ ಬಿಡುತ್ತದೆ ಎಂದು ಅದರ ಗಂಭೀರ ಪರಿಣಾಮವನ್ನು ಭಜಂತ್ರಿ ವಿವರಿಸಿದರು.
ಬಸವರಾಜ ಗುಡ್ಡಪ್ಪ ತಂಡದ ಕಲಾವಿದರು ಬೀದಿ ನಾಟಕ ಪ್ರದರ್ಶಿಸಿ ವ್ಯಸನದಿಂದ ಏನೆಲ್ಲ ಸಂಕಷ್ಟ ಎದುರಾಗುತ್ತದೆ ಎಂದು ಜಾಗೃತಿ ಮೂಡಿಸಿದರು. ಎಸ್.ಎಸ್. ಹಿರೇಮಠ ಹರ್ಲಾಪುರ ಜಾನಪದ ಕಲಾ ತಂಡದ ಸದಸ್ಯರು ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಅಮ್ಮನ ಕುರಿತಾಗಿ ಹಾಡಿದ ಜಾನಪದ ಹಾಡು ಕೇಳಿ ಕೈದಿಗಳ ಕಣ್ಣಂಚು ಒದ್ದೆಯಾಗಿತ್ತು. ದುಃಖ ತಾಳಲಾರದ ಕೈದಿಯೊಬ್ಬ, ವೇದಿಕೆ ಎದುರಿಗೆ ಹೋಗಿ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಭಾವನೆ ತೋಡಿಕೊಂಡ. ಅತ್ತು ಹಗುರಾದ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಬೆಳಗಾವಿ ವಲಯದ ಎಸ್ಪಿ ಅನಿಲಕುಮಾರ ಭೂಮರೆಡ್ಡಿ, ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿಗಳಿಗೆ ಇರುವ ಶಿಕ್ಷೆಗಳೇನು ಎನ್ನುವ ಮಾಹಿತಿ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಕಾರ್ಯಕ್ರಮ ಉದ್ಘಾಟಿಸಿದರು. ಕಾರಾಗೃಹದ ಸಿಬ್ಬಂದಿ ಇದ್ದರು.
Check Also
ಬಾಬಾ ಸಾಹೇಬರಿಗೆ ಅಪಮಾನ – ಬಹಿರಂಗ ಚರ್ಚೆಗೆ ಬೆಲ್ಲದ ಸವಾಲು: ಅರವಿಂದ ಬೆಲ್ಲದ
Spread the loveಹುಬ್ಬಳ್ಳಿ:ಅಮಿತ್ ಶಾ ಅವರು ಸಂಸತ್ತಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಿ, ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡಿದ್ದು ಕಾಂಗ್ರೆಸ್ ಟೂಲ್‌ಕಿಟ್‌ನ …