ಹುಬ್ಬಳ್ಳಿ: ನಾವಿರುವುದೇ ಭಾರತ ಆಳಲಿಕ್ಕಾಗಿ ಎಂಬ ಮನಸ್ಥಿತಿ ಹೊಂದಿದ್ದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಕುಟುಂಬ ಭಾರತದ ಪ್ರಜಾಪ್ರಭುತ್ವ ಅಸ್ಥಿರಗೊಳಿಸಿದ್ದ ಸ್ಥಿತಿಯನ್ನು ನರೇಂದ್ರ ಮೋದಿ ಸರಕಾರ ಅಳಿಸಿ ಹಾಕಿ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ಸ್ಥಾಪಿಸಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗಟ್ಟಿಗೊಳಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನವದೆಹಲಿಯಿಂದ ವೆಬೆಕ್ಸ್ ಮೂಲಕ ಬಿಜೆಪಿ ಧಾರವಾಡ ವಿಭಾಗವು 1975-77ರ ನಡುವಿನ ತುರ್ತು ಪರಿಸ್ಥಿತಿ ಅವಧಿಯನ್ನು ಕರಾಳ ದಿನವನ್ನಾಗಿ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದರು. ಅಂಬೇಡ್ಕರ್ ಅವರ ಮಾತುಗಳನ್ನು ನೆನಪಿಸಿಕೊಂಡ ಜೋಶಿ, ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದಂತೆ ಸಂವಿಧಾನ ಎಷ್ಟೇ ಉತ್ತಮವಿರಲಿ ಅದನ್ನು ಜಾರಿಗೊಳಿಸುವವರು ಒಳ್ಳೆಯವರಾಗಿರದಿದ್ದರೆ ಅದು ದೇಶಕ್ಕೆ ಅಥವಾ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ ಅಥವಾ ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದರಲ್ಲಿನ ಒಳ್ಳೆಯ ಅಂಶವನ್ನು ಪಡೆದು ಆಡಳಿತ ನಡೆಸುವವರಿದ್ದರೆ ಯಾವುದೇ ಹಾನಿಯಾಗುವುದಿಲ್ಲ, ಇದರ ತಾತ್ಪರ್ಯ ವಿಷ್ಟೆ ಆಡಳಿತಗಾರರು ಒಳ್ಳೆಯವರು, ಉತ್ತಮರಾಗಿರಬೇಕು ಎನ್ನುವುದು ಎಂದು ಹೇಳಿದರು.
1975ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ಇಂದಿರಾಗಾಂಧಿ ಅವರ ಚುನಾವಣೆ ಆಯ್ಕೆ ಪ್ರಶ್ನಿಸಿ ಅಂದಿನ ನ್ಯಾಯಾಧೀಶ ಜಗಮೋಹನ್ ಸಿನ್ಹಾ, ರಾಜನಾ ರಾಯಣ ಅವರ ವಾದ ಎತ್ತಿ ಹಿಡಿದು ಇಂದಿರಾಗಾಂಧಿಯವರ ಲೋಕಸಭಾ ಚುನಾವಣಾ ಆಯ್ಕೆ ಅಸಿಂಧುಗೊಳಿಸಿದ ನಂತರ ದೇಶದ ಮೇಲಿನ ತಮ್ಮ ಸರ್ವಾಧಿಕಾರಿ ಹಿಡಿತ ರಕ್ಷಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಿಸಿದರು. ಅಂದರೆ ನೆಹರು, ಗಾಂಧಿ ಮನೆತನದ ಅಧಿಕಾರ ಪ್ರಶ್ನಿಸಿದ್ದ ಸಂದರ್ಭ ಬಂದಿತೆಂದರೆ ಅದೇ ದೇಶಕ್ಕೆ ಗಂಡಾಂತರವೆಂಬ ಮನೋಧರ್ಮ ಇಂದಿಗೂ ಕಾಂಗ್ರೆಸ್ಸಿನಲ್ಲಿದೆ. ಇತಿಹಾಸದಲ್ಲಿ ನಡೆದುಹೋದ ಇಂತಹ ಕರಾಳ ದಿನದ ಬಗ್ಗೆ ಕಾಂಗ್ರೆಸ್ಸಿಗರಿಗೆ ಕಿಂಚಿತ್ತೂ ನಾಚಿಕೆ, ಅಪರಾಧಿ ಮನೋಭಾವದ ಸುಳಿವೂ ಇಲ್ಲ ಎಂದು ಜೋಶಿ ಹೇಳಿದರು.