https://youtu.be/ggnD9XhjqRs
ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಿವಿಧ ಪ್ರಕಾರದ ಡ್ರಗ್ಸ್ ನ್ನು ಶನಿವಾರ ನಾಶ ಪಡಿಸಲಾಗುವುದು ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಅಂತರಾಷ್ಟ್ರೀಯ ಡ್ರಗ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಡ್ರಗ್ಸ್ ನಾಶ ಮಾಡಲಾಗುವುದು ಎಂದು ಅವರು ತಿಳಿಸಿದರು. ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಗಾಂಜಾ-ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, ಕೊಕೆನ್ ಸೇರಿದಂತೆ ಒಟ್ಟು ಹನ್ನೆರಡು ಪ್ರಕಾರದ 50.23 ಕೋಟಿ ಮೊತ್ತದ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು. ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು ಎಂದು ಅವರು ತಿಳಿಸಿದರು. 2020 ನೇ ಸಾಲಿನಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಒಟ್ಟು 4066 ಪ್ರಕರಣಗಳನ್ನು ದಾಖಲಿಸಿ ಕೊಂಡು 5291 ಜನರನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.
ದೇಶದಲ್ಲಿ ಮೊಟ್ಟ ಮೊದಲ ಬಾರಿ PIT NDPS ಕಾಯಿದೆ ( ಪ್ರಿವೆನಶನ್ ಆಫ್ ಇಲ್ಲಿಸಿಟ್ ಟ್ರಾಫಿಕಿಂಗ್ ನಾರ್ಕೋಟಿಕ್ ಡ್ರಗ್ಸ್ ಸೈಕ್ಯಾಟ್ರಿಕ್ ಸಬಸ್ಟನ್ಸ್ ) ಅಡಿ ಡ್ರಗ್ಸ್ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಇದು ಒಂದು ರೀತಿ ಗೂಂಡಾ ಕಾಯಿದೆ ಇದ್ದಂತೆ. ಅಷ್ಟು ಬೇಗ ಬೇಲ್ ಸಿಗುವುದಿಲ್ಲ. ವಿದೇಶಿಗರು ಸೇರಿದಂತೆ ಹಲವರನ್ನು ಈ ಕಾಯಿದೆ ಅಡಿ ಬಂಧಿಸಲಾಗಿದೆ ಎಂದು ಅವರು ಹೇಳಿದರು. ಎನ್ ಡಿ ಪಿ ಎಸ್ ಕಾಯಿದೆಯನ್ನು ಮತ್ತಷ್ಟು ಬಿಗಿ ಗೊಳಿಸಲಾಗುವುದು. ಇದಕ್ಕಾಗಿ ನ್ಯಾಷನಲ್ ಲಾ ಸ್ಕೂಲ್ ಜತೆ ಮಾತುಕತೆ ನಡೆಯುತ್ತಿದೆ. ಬರುವ ಅಧಿವೇಶನದಲ್ಲಿ ಈ ಕಾಯಿದೆಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ಸಚಿವರಾದ ಬೊಮ್ಮಾಯಿ ತಿಳಿಸಿದರು.
ಸೆಲೆಬ್ರಿಟಿಗಳ ಡ್ರಗ್ ಪ್ರಕರಣದ ತನಿಖೆ ಮುಗಿದಿದೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗುವುದು ಎಂದು ಸಚಿವ ಬೊಮ್ಮಾಯಿ ಹೇಳಿದರು. ಕಳೆದ ವರ್ಷ ನಮ್ಮ ಪೋಲಿಸ್ ರು ಉತ್ತಮ ಕೆಲಸ ಮಾಡಿದ್ದಾರೆ. ಅವರ ಕೆಲಸದ ಬಗ್ಗೆ ಮೆಚ್ಚುಗೆ ಇದೆ. ಒಂದೇ ವರ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ ಜಾಲಗಳನ್ನು ಬೇಧಿಸಿದ್ದಾರೆ ಎಂದು ಅವರು ಹೇಳಿದರು. ಇದು ಕೋವಿಡ್ ಸಂದರ್ಭ. ಅಧಿವೇಶನ ಬೇಡ ಎಂದು ವಿಷಯ ಸಮೀತಿ ಸ್ಪೀಕರ್ ಗೆ ವರದಿ ಸಲ್ಲಿಸಿದೆ. ಈಗ ಡೆಲ್ಟಾ, ಡೆಲ್ಟಾ ಪ್ಲಸ್ ಕೊರೊನಾ ವೈರಸ್ ಪತ್ತೆ ಆಗುತ್ತಿದೆ. ಈಗಿನ ಕೋವಿಡ್ ಸ್ಥಿತಿ ನೋಡಿಕೊಂಡು ಸಿಎಂ ಮತ್ತು ಸಚಿವ ಸಂಪುಟ ಸಹೋದ್ಯೋಗಿಗಳ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡಲಾಗುವುದು.ಬಸವರಾಜ ಬೊಮ್ಮಾಯಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು