ಧಾರವಾಡ; ಕೋವಿಡ್ ಮೂರನೇ ಅಲೆ ನಿಯಂತ್ರಣ ಮತ್ತು ತಡೆಗೆ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರುಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾ ಆಸ್ಪತ್ರೆಯವರೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ವಾರ್ಡ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ,ಮಕ್ಕಳ ಅಭಿವೃದ್ಧಿ,ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ಕಮಲಾಪುರದ ಕುಂಬಾರ ಓಣಿಯಲ್ಲಿಂದು ಕೋವಿಡ್ ಎರಡನೇ ಅಲೆಯಲ್ಲಿ ತಂದೆ -ತಾಯಿ ಇಬ್ಬರನ್ನೂ ಕಳೆದುಕೊಂಡ ಶಿವಾಜಿ ಮಲ್ಲಪ್ಪ ಗಾರಗೆ ( 12) , ಅಮೃತಾ( 04) ಮಕ್ಕಳನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದ ,ಸಂಬಂಧಿಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ 15 ದಿನಗಳಿಂದ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕೋವಿಡ್ ಎರಡನೇ ಅಲೆಯಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ಅಂತಹ ಮಕ್ಕಳಿಗೆ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಉಚಿತ ಶಿಕ್ಷಣ ಹಾಗೂ ಮಾಸಿಕ ತಲಾ 3,500 ರೂ.ನೆರವು ನೀಡಲಾಗುತ್ತದೆ.ಎಸ್ ಎಸ್ ಎಲ್ ಸಿ ನಂತರ ಲ್ಯಾಪ್‌ಟಾಪ್ ,ಟ್ಯಾಬ್ ನೀಡಲಾಗುವುದು.ಹೆಣ್ಣು ಮಗುವಿದ್ದರೆ ಆಕೆಗೆ 21 ವರ್ಷಗಳಾದ ನಂತರ ಒಂದು ಲಕ್ಷ ರೂ.ನೀಡಲಾಗುವುದು. ಒಬ್ಬರೇ ಪೋಷಕರನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ ಬಾಲಸ್ವರಾಜ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತಿದೆ ಎಂದರು.
ಮೂರನೇ ಅಲೆ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಖ್ಯಮಂತ್ರಿಯವರು ಹಾಗೂ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗುತ್ತಿದೆ ಎಂದರು.
