ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ರವಿನಗರದ ಹದಗೆಟ್ಟ ರಸ್ತೆಗೆ ಎರಡು ಸಲ ದುರಸ್ತಿ ಭಾಗ್ಯ ಸಿಕ್ಕಿದೆ! ಬೆಳಿಗ್ಗೆ ಕಾಂಗ್ರೆಸ್ ಪಕ್ಷದಿಂದ ಹಾಗೂ ಮಧ್ಯಾಹ್ನ ಮಹಾನಗರ ಪಾಲಿಕೆ ವತಿಯಿಂದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ.
ಗುಂಡಿಗಳಿಂದ ಆವೃತವಾಗಿ ಮಳೆ ನೀರು ನಿಂತಿದ್ದ ರಸ್ತೆಯ ಸ್ಥಿತಿ ಖಂಡಿಸಿ, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಜೂನ್ 18ರಂದು ಪ್ರತಿಭಟನೆ ನಡೆದಿತ್ತು. ಕಾರ್ಯಕರ್ತರು ಮಳೆ ನೀರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಕಟೌಟ್ ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನೆ ನಡೆದು ಎರಡು ದಿನವಾದರೂ ಪಾಲಿಕೆಯು ರಸ್ತೆಯನ್ನು ದುರಸ್ತಿ ಮಾಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತರು, ಬೆಳಿಗ್ಗೆ ಲಾರಿಯಲ್ಲಿ ಮಣ್ಣು ತಂದು ರಸ್ತೆಗೆ ಸುರಿದರು. ಜೆಸಿಬಿ ಬಳಸಿ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡಿದರು.
ವಿಷಯ ತಿಳಿದ ಪಾಲಿಕೆಯವರು ಮಧ್ಯಾಹ್ನದ ಹೊತ್ತಿಗೆ ರಸ್ತೆ ದುರಸ್ತಿಗೆ ಮುಂದಾದರು. ಕಾಂಗ್ರೆಸ್‌ನವರು ಅದಾಗಲೇ ರಸ್ತೆಗೆ ಹಾಕಿದ್ದ ಮಣ್ಣನ್ನು ಜೆಸಿಬಿಯಿಂದ ತೆರವುಗೊಳಿಸಿ, ಸಿಮೆಂಟ್ ಮಿಶ್ರಿತ ಜಲ್ಲಿಪುಡಿಯನ್ನು ಹಾಕಿ ಗುಂಡಿಗಳನ್ನು ಮುಚ್ಚಿದರು.
