https://youtu.be/vyXQLLq62IY
ಧಾರವಾಡ: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುರಿತು ಈಗಿನಿಂದಲೇ ಚರ್ಚೆಗಳು ನಡೆಯುತ್ತಿವೆ. ಮುಂದಿನ ಮುಖ್ಯಮಂತ್ರಿ ನಾನೇ ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದರೆ, ಇಲ್ಲ ಮುಂದಿನ ಮುಖ್ಯಮಂತ್ರಿ ನಾನು ಎಂದು ಡಿ.ಕೆ.ಶಿವಕುಮಾರ ಹೇಳುತ್ತಿದ್ದಾರೆ. ಇವರಿಬ್ಬರ ಮಧ್ಯೆ ಡಾ.ಜಿ.ಪರಮೇಶ್ವರ ಅವರೂ ಕೂಡ ಪ್ರಯತ್ನ ನಡೆಸುತ್ತಿದ್ದಾರೆ. ಇದೆಲ್ಲ ಬೆಳವಣಿಗೆ ಮಜ್ಜಿಗೆ ಮತ್ತು ಮೀಸೆ ಕಥೆಯಾದಂತಾಗಿದೆ ಎಂದು ಗೋವಿಂದ ಕಾರಜೋಳ ಅವರು ಮಜ್ಜಿಗೆ ಮತ್ತು ಮೀಸೆ ಕಥೆ ಹೇಳುವ ಮೂಲಕ ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೂ ಚುನಾವಣೆ ಒಂದೂ ಮುಕ್ಕಾಲು ವರ್ಷ ಇದೆ. ಈಗಲೇ ಕಾಂಗ್ರೆಸ್ ನಾಯಕರು ತಮ್ಮ ತಮ್ಮಲ್ಲೇ ಪೈಪೋಟಿ ನಡೆಸುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಇಲ್ಲ. ಪೂರ್ಣಾವಧಿಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಖುರ್ಚಿ ಖಾಲಿ ಇದ್ದಾಗ ಮಾತ್ರ ಪರ್ಯಾಯ ನಾಯಕನನ್ನು ಹುಡುಕಬೇಕಾಗುತ್ತದೆ. ಈಗ ಖುರ್ಚಿ ಖಾಲಿ ಇಲ್ಲ. ದೆಹಲಿಗೆ ಕೆಲವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಹೋಗಿರುವುದಾಗಿ ಹೇಳಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಅವರಿಗೆ ದೆಹಲಿಗೆ ಹೋಗಬೇಡಿ ಎಂದು ಹೇಳಲಿಕ್ಕಾಗದು ಎಂದರು.
ಇನ್ನು ರಮೇಶ ಜಾರಕಿಹೊಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಮೇಶ ಜಾರಕಿಹೊಳಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಅದು ಮಾಧ್ಯಮಗಳ ಸೃಷ್ಟಿ. ಮಹಾರಾಷ್ಟ್ರ ಮಾಜಿ ಸಿಎಂ ಜೊತೆ ಅವರು ಉತ್ತಮ ಸಂಬಂಧ ಹೊಂದಿರುವುದರಿಂದ ಸಹಜವಾಗಿಯೇ ಅವರನ್ನು ಭೇಟಿ ಮಾಡಿದ್ದಾರೆ. ಅದರಲ್ಲಿ ಯಾವುದೇ ವಿಶೇಷವಿಲ್ಲ ಎಂದರು.