ಹುಬ್ಬಳ್ಳಿ; ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಬಸ್ಸುಗಳ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಹುಬ್ಭಳ್ಳಿ ಗ್ರಾಮಾಂತರ 2 ನೇ ಘಟಕದಲ್ಲಿ ಸಸಿ ನೆಟ್ಟು ಬಸ್ಸಿನ ಹೊಗೆ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ ಮಾತನಾಡಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಎಲ್ಲಾ ಡಿಪೋಗಳು ಮತ್ತು ಬಸ್ ನಿಲ್ದಾಣಗಳಲ್ಲಿರುವ ಖಾಲಿ ಜಾಗದಲ್ಲಿ ವಿವಿಧ ಜಾತಿಯಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ವಿಭಾಗದಲ್ಲಿ 465 ಬಸ್ಸುಗಳಿವೆ. ನಿಯಮಿತವಾಗಿ ಎಲ್ಲಾ ಬಸ್ಸುಗಳ ಹೊಗೆ ತಪಾಸಣೆ ಮಾಡಲಾಗುತ್ತದೆ. ನಿಗದಿಗಿಂತ ಹೆಚ್ಚಿನ ಪ್ರಮಾಣದ ಹೊಗೆ ಉಗುಳುವ ಬಸ್ಸುಗಳ ದೋಷಗಳನ್ನು ಸರಿಪಡಿಸಿದ ನಂತರವೆ ಮಾರ್ಗದ ಮೇಲೆ ನಿಯೋಜಿಸಲಾಗುತ್ತದೆ ಎಂದು ಹೇಳಿದರು. ವಿಭಾಗದಲ್ಲಿ ಒಟ್ಟು 2216 ನೌಕರರಿದ್ದಾರೆ. ಅವರಲ್ಲಿ 1500ಕ್ಕೂ ಹೆಚ್ಚು ಚಾಲಕ-ನಿರ್ವಾಹಕರು ಗಳಿದ್ದಾರೆ. ಸರ್ಕಾರವು ಕೋವಿಡ್ ಲಸಿಕೆ ಹಾಕಿಸಲು ಸಾರಿಗೆ ನೌಕರರನ್ನು ಆದ್ಯತಾ ಗುಂಪಿನಲ್ಲಿ ಸೇರಿಸಿ ಅದೇಶ ಹೊರಡಿಸಿರುತ್ತದೆ. ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ. ಈಗಾಗಲೆ ಶೇಕಡ 85 ರಷ್ಟು ಸಿಬ್ಬಂದಿ ಮೊದಲನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಕೆಲವು ಸಿಬ್ಬಂದಿಗಳು ಎರಡನೇ ಡೋಸ್ ನ್ನು ಸಹ ಪಡೆದುಕೊಂಡಿದ್ದಾರೆ. ಸರ್ಕಾರದ ಆದೇಶಗಳು ಬಂದ ನಂತರ ಹಂತ ಹಂತವಾಗಿ ಬಸ್ಸುಗಳ ಕಾರ್ಯಚರಣೆ ಆರಂಭಿಸಲಾಗುತ್ತದೆ.ಆಗ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಎರಡೂ ಡೋಸ್ ಲಸಿಕೆಯನ್ನು ಪಡೆದಿರುವ ಸಿಬ್ಬಂದಿಗಳಿಗೆ ಮೊದಲ ಆದ್ಯತೆ ನೀಡಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಅದ್ದರಿಂದ ಇನ್ನುಳಿದ ಎಲ್ಲಾ ಸಿಬ್ಬಂದಿಗಳು ತ್ವರಿತವಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.ವಿಭಾಗೀಯ ಸಂಚಾರ ಅಧಿಕಾರಿ ಎಸ್.ಎಸ್.ಮುಜುಂದಾರ, ವಿಭಾಗೀಯ ತಾಂತ್ರಿಕ ಇಂಜಿನಿಯರ ಕಿರಣಕುಮಾರ ಬಸಾಪುರ, ಘಟಕ ವ್ಯವಸ್ಥಾಪಕ ವೈ.ಎಂ. ಶಿವರೆಡ್ಡಿ ಮತ್ತಿತರ ಅಧಿಕಾರಿಗಳು ಇದ್ದರು.
