ಧಾರವಾಡ: ಆಕ್ಸಿಜನ್ ಕೊರತೆಯಿಂದ ನರಳಾಡುತ್ತಿದ್ದ ವ್ಯಕ್ತಿಗೆ ಅಂಬ್ಯುಲೆನ್ಸ್‌ನಲ್ಲಿ ಆಕ್ಸಿಜನ್ ಪೂರೈಕೆ ಮಾಡದೇ ಹೋಗಿದ್ದರಿಂದ ಆ ವ್ಯಕ್ತಿ ಅಸುನೀಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಕುತ್ಬುದ್ದೀನ್ ನನ್ನೇಸಾಬ್‌ನವರ ಎಂಬುವವರೇ ಅಸುನೀಗಿರುವ ವ್ಯಕ್ತಿ.
ಆಕ್ಸಿಜನ್ ಸಮಸ್ಯೆಯಿಂದ ನರಳಾಡುತ್ತಿದ್ದ ಈ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಮೂಲಕ ಧಾರವಾಡದ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ವೇಳೆ ಮಾರ್ಗ ಮಧ್ಯೆ ತೀವ್ರ ಉಸಿರಾಟದ ಸಮಸ್ಯೆಯಿಂದ ಒದ್ದಾಡಲು ಪ್ರಾರಂಭಿಸಿದ ಕುತ್ಬುದ್ದೀನ್ ಅವರಿಗೆ ಆಕ್ಸಿಜನ್ ಪೂರೈಕೆ ಮಾಡುವಂತೆ ಅಂಬ್ಯುಲೆನ್ಸ್ ಡ್ರೈವರ್‌ಗೆ ಹೇಳಿದರೂ ಆತ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಆಕ್ಸಿಜನ್ ಬಟನ್ ಬಂದ್ ಮಾಡಿಯೇ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಡ್ರೈವರ್ ಮಾಡಿದ ಯಡವಟ್ಟಿನಿಂದ ಕುತ್ಬುದ್ದೀನ್ ಸಾವಿಗೀಡಾಗಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಕುತ್ಬುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್‌ನಲ್ಲಿ ಡ್ರೈವರ್ ಬಿಟ್ಟರೆ ಬೇರೆ ಯಾವ ವೈದ್ಯರೂ ಬಂದಿರಲಿಲ್ಲ. ನಮಗೆ ನ್ಯಾಯ ಕೊಡುವವರು ಯಾರು? ಬೇರೆ ಯಾರಿಗೂ ಈ ರೀತಿ ಅನ್ಯಾಯ ಆಗಬಾರದು ಎಂದು ಕುಟುಂಬಸ್ಥರು ತಡರಾತ್ರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲೇ ರೋಧಿಸುತ್ತಿದ್ದ ದೃಶ್ಯ ಕಂಡು ಬಂತು.