Breaking News

ನವಲಗುಂದದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ*

Spread the love

*ನವಲಗುಂದದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ*

*ನಂಬಿಕೆಯಿಂದಲೇ ಅನೇಕ ಕಾಯಿಲೆ ದೂರ- ಶ್ರೀ ವೀರೇಂದ್ರ ಸ್ವಾಮೀಜಿ*

ಹುಬ್ಬಳ್ಳಿ: ಎಷ್ಟೋ ಬಾರಿ ಕಾಯಿಲೆಗೆ ನೀಡುವ ಔಷಧಕ್ಕಿಂತ ವೈದ್ಯರ ಮೇಲಿನ ನಂಬಿಕೆಯೇ ಅನೇಕ ರೋಗಿಗಳ ಕಾಯಿಲೆಯನ್ನು ಗುಣಪಡಿಸಲಿದೆ ಎಂದು ನವಲಗುಂದದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠದ ಪಂಚಮ ಪೀಠಾಧೀಶರಾದ ಶ್ರೀ ವೀರೇಂದ್ರ ಸ್ವಾಮಿಗಳು ತಿಳಿಸಿದರು.

ಹುಬ್ಬಳ್ಳಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನವಲಗುಂದದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠ, ಶ್ರೀ ಹಾದಿ ಬಸವೇಶ್ವರ ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಶ್ರೀ ಮಠದ ಶ್ರೀ ನಾಗಲಿಂಗ ಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಾಮರಸ್ಯ ಹಾಗೂ ನಂಬಿಕೆಯ ಪುಣ್ಯ ನೆಲವಾದ ಶ್ರೀ ನಾಗಲಿಂಗ ಅಜ್ಜರ ಮಠದಲ್ಲಿ ದಶಕದ ನಂತರ ಆರೋಗ್ಯ ಶಿಬಿರ ನಡೆಯುತ್ತಿರುವುದು ಶ್ಲಾಘನೀಯ. ಇಂಥ ಪವಿತ್ರ ಸ್ಥಳದಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಜೊತೆಗೆ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅರಿವು ಮೂಡಿಸುತ್ತಿರುವುದು ವೈದ್ಯರ ಮೇಲಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಇಂಥ ಶಿಬಿರಗಳಿಂದ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಹೊರೆ ತಗ್ಗಿಸುವ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ. ಉತ್ತಮ ಆಹಾರ ಕ್ರಮದ ಜೊತೆಗೆ ನಿತ್ಯ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಉತ್ತಮ ದೇಹಾರೋಗ್ಯ ಹೊಂದಬಹುದಾಗಿದೆ ಎಂದರು.

ಶಿಬಿರದ ನೇತೃತ್ವ ವಹಿಸಿದ್ದ ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್, ಖ್ಯಾತ ನರರೋಗ ತಜ್ಞ ಡಾ. ಕ್ರಾಂತಿಕಿರಣ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿಯಿಂದ ಪ್ರಸ್ತುತ ಮನುಷ್ಯನಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಸ್ವಸ್ಥ ಸಮಾಜ ನಿರ್ಮಿಸಲು ಬಾಲಾಜಿ ಆಸ್ಪತ್ರೆ ವತಿಯಿಂದ ನಗರ ಪ್ರದೇಶದ ವಿವಿಧೆಡೆ ಹಲವಾರು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದಂತೆ ಗ್ರಾಮೀಣ ಭಾಗದ ಜನರಿಗೂ ನಮ್ಮ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ಕೇವಲ ತಪಾಸಣೆ ಮಾತ್ರವಲ್ಲದೇ ಉಚಿತ ಔಷಧ ನೀಡುವ ಜೊತೆಗೆ ಅಗತ್ಯವಿರುವವರಿಗೆ ನಮ್ಮ ಆಸ್ಪತ್ರೆಯಲ್ಲಿ ಉನ್ನತ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸೆಯನ್ನೂ ಸಹ ರಿಯಾಯಿತಿ ದರದಲ್ಲಿ ಮಾಡಲಾಗುವುದು ಎಂದು ಹೇಳಿದರು.

ಹಿರಿಯ ವೈದ್ಯರಾದ ಡಾ. ಆನಂದ ಕೊಪ್ಪದ, ಡಾ. ಜಯಮೇಜಯ, ಡಾ. ಅಖಿಲೇಶ ಜೋಶಿ, ಡಾ. ಸುರೇಶ ಕಮ್ಮಾರ, ಸ್ಥಳೀಯ ಪ್ರಮುಖರಾದ ಶ್ರೀ ಸಿದ್ದಯ್ಯ ಸ್ವಾಮಿಮಿಗಳು, ಎಂ.ಎನ್. ವಿಶ್ವಜ್ಞ, ಎನ್.ಬಿ. ಬಡಿಗೇರ, ಕುಮಾರ ನರಗುಂದ, ವಿಷ್ಣು, ಎಲ್.ಎಚ್. ಕಮ್ಮಾರ, ಮಂಜು ಸುಣಗಾರ, ಎಂ.ಬಿ. ತೋಟಿ, ಹನುಮಂತ ತೆಗ್ಗಿ, ವಿಜಯ ಕಟ್ಲಾಸ್ಕರ, ಹರೀಶ ತೇರದಾಳ, ಇತರರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಬಿಪಿ/ಶುಗರ್, ಎಲುಬು-ಕೀಲು, ನರರೋಗ, ಹೃದ್ರೋಗ, ಇತರೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸಿ, ಔಷಧ ವಿತರಿಸಿದರು. 170ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.


Spread the love

About Karnataka Junction

[ajax_load_more]

Check Also

ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಚಾಲಕ‌ ಮತ್ತು ನಿರ್ವಾಹಕ

Spread the love *ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಚಾಲಕ‌ ಮತ್ತು ನಿರ್ವಾಹಕ …

Leave a Reply

error: Content is protected !!