ಹುಬ್ಬಳ್ಳಿ;
ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು ಭಾಗಶಃ ಹಾಳಾಗಿದ್ದು ಕೇಂದ್ರ ಸರ್ಕಾರ ಮಾನದಂಡದಂತೆ ಪರಿಹಾರ ನೀಡಲು ಸಿದ್ದರಾಮಯ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಏನ್ ಹೆಚ್ ಕೋನರಡ್ಡಿ ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಜರುಗಿದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (KDP) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಇತ್ತಿಚೆಗೆ ಬಿಜೆಪಿ ಮಾಜಿ ಶಾಸಕರು ಪ್ರತಿಭಟನೆ ಮಾಡಿ ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕಿ ಕ್ಷೇತ್ರದ ಶಾಸಕರು ಪ್ರವಾಹ ಪೀಡಿತ ಪ್ರದೇಶ ಕಡೆ ಗಮನಕೊಡದೆ ವಿದೇಶಕ್ಕೆ ಹಾರಿದ್ದಾರೆ ಎಂದು ಆರೋಪ ಮಾಡಿದರು. ಆದರೆ ತಮ್ಮ ಅವಧಿಯಲ್ಲಿ ಒಂದು ಘಳಿಗೆ ಕೂಡ ಜನರ ಸಂಪರ್ಕ ಬಾರದೆ ವಿದೇಶ ಯಾತ್ರೆ ಮಾಡುತ್ತಿದ್ದರು ಎಂದು ಹೇಳಿದ ಅವರು ರಾಜಕಾರಣದಲ್ಲಿ 30 ವರ್ಷಗಳಿಂದ ಹಲವು ಏಳುಬೀಳು ಕಂಡು ರೈತರ ಜೊತೆ ಹೋರಾಡಿ ರಾಜ್ಯ ಮಟ್ಟಕ್ಕೆ ಬೆಳೆದಿದ್ದು ,ನನಗೆ ಯಾರ ಪ್ರಮಾಣಪತ್ರ ಬೇಕಾಗಲಿಲ್ಲ ಇನ್ನು ಬಿಜೆಪಿ ಯವರು ಯಾವ ಮಟ್ಟಕ್ಕೆ ಇದ್ದಾರೆ ಅನ್ನುವುದು ಅವರು ಕೂದಲೆಳೆ ನಾನು ಬಲ್ಲವನಾಗಿದ್ದೇನೆ ಎಂದು ತಿರುಗೇಟು ನೀಡಿದರು.
ಇತ್ತೀಚೆಗೆ ಮಳೆ ಯಿಂದ ಹದಗೆಟ್ಟ ನವಲಗುಂದ ತಾಲೂಕಿನ ಗುಡಿಸಾಗರ, ನಾಗನೂರ-ತಡಹಾಳ-ಕೊಂಗವಾಡ-ದಾಟನಾಳ ರಸ್ತೆ, ಯಮನೂರ-ಶಾನವಾಡ-ಹಾಲಕುಸುಗಲ್ಲ-ಬಳ್ಳೂರ ರಸ್ತೆ, ಹಣಸಿ-ಶಿರಕೊಳ-ಮೊರಬ ರಸ್ತೆ, ಅಳಗವಾಡಿ-ಹಾಲಕುಸುಗಲ್-ತಿರ್ಲಾಪುರ, ಗುಮ್ಮಗೊಳ ಮೊರಬ, ತೆಲೆಮೊರಬದಿಂದ ಕ್ರಾಸವರೆಗಿನ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ನವಲಗುಂದ-ನಲವಡಿ ರಸ್ತೆಯನ್ನು ಪೂರ್ಣಾಗೊಳಿಸಲು ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ 20 ಕೋಟಿ ಅನುದಾನ ಬಿಡುಗಡೆ ಆಗಿದೆ. ಬೆಣ್ಣಿಹಳ್ಳ ಹಾಗೂ ವಿವಿಧ ಹಳ್ಳಗಳಿಂದ ಹಾನಿಯಾದ ಪ್ರದೇಶಕ್ಕೆ ಸ್ವತ ಅಧಿಕಾರಿಗಳೊಂದಿಗೆ ನಾನು ಭೇಟಿ ನೀಡಿ ಸರ್ವೆ ಕಾರ್ಯಮಾಡಿದೆ. ಕಾಲವಾಡ ಹಾಗೂ ಮಂಟೂರ ಗ್ರಾಮದ ಹತ್ತಿರ ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ ಇಬ್ಬರನ್ನು ರಕ್ಷಿಸಲಾಗಿದೆ. ತಿರ್ಲಾಪುರ ಗ್ರಾಮದಲ್ಲಿರುವ ಕುಡಿಯುವ ಕೆರೆ ನೀರು ಹೊರಚೆಲ್ಲಿ ವಿವಿಧ ಓಣಿಗಳಿಗೆ ಹಾಗೂ ಶಾಲೆಗೆ ನೀರು ನುಗ್ಗಿದನ್ನು ಪರಿಹರಿಸಲಾಗಿದೆ ಎಂದರು.
ಅಣ್ಣಿಗೆರಿ ತಾಲೂಕಿನ ಹಳ್ಳಿಕೆರಿ-ಅಣ್ಣಿಗೆರಿ, ಇಬ್ರಾಹಿಂಪುರ-ಹಳ್ಳಿಕೇರಿ, ನಾವಳ್ಳಿ-ಕಿತ್ತೂರ-ಅಡ್ನೂರ-ಹಳ್ಳಿಕೇರಿ ರಸ್ತೆ, ಅಣ್ಣಿಗೆರಿ-ಕೋಂಡಿಕೊಪ್ಪ, ಸಾಸ್ವಿಹಳ್ಳಿ-ಹಳ್ಳಿಕೇರಿ ರಸ್ತೆ, ಬಸಾಪೂರ- ಭದ್ರಾಪುರ ನಡುವೆ ಇರುವ ಹಳ್ಳಕ್ಕೆ ನೂತನ ಸೇತುವೆ ನಿರ್ಮಾಣ, ಮಣಕವಾಡ-ಶಿಶುವಿನಹಳ್ಳಿ ಬೆಳಹಾರ ವರೆಗಿನ ಇಂಗಳಹಳ್ಳಿ ಯಿಂದ ಶಿಶನಹಳ್ಳಿ ಸಂಪರ್ಕ ಕಡಿತಗೊಂಡಿದ್ದು ದುರಸ್ಥಿ ಮಾಡುವ ಕಾರ್ಯ ಮಾಡಿದೆ.
ಆದರೆ ಬಿಜೆಪಿಯವರು ಕೇಂದ್ರ ಸರ್ಕಾರದಿಂದ ಅತೀವೃಷ್ಟಿ ಪರಿಹಾರ ಹಾಗೂ ಮೃತಪಟ್ಟವರಿಗೆ ಹೆಚ್ಚಿನ ಪರಿಹಾರ ನೀಡಲು ಮಾನದಂಡಗಳನ್ನು ಬದಲಾವಣೆ ಮಾಡಲು ಹೋರಾಟ ಮಾಡಿದರೆ ಮಾತ್ರ ಅವರಿಗೆ ಶೊಭೆ ಬರುತ್ತದೆ. ಎ, ಬಿ, ಸಿ ಮಾದರಿಯಲ್ಲಿ ಮನೆ ಬಿದ್ದವರಿಗೆ ಹೆಚ್ಚು ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಕೆಲವೊಬ್ಬರಿಗೆ ಮಾತ್ರ ಒಂದು ಕಂತು ಬಿಡುಗಡೆ ಮಾಡಿ ಅವರು ಅಧಿಕಾರದಲ್ಲಿದ್ದಾಗ ಅದನ್ನು ಸ್ಥಗಿತಗೋಳಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ ತಿಳಿ ಹೇಳಿದರು.
ಇಂದು ನನ್ನ ಅವಧಿಯಲ್ಲಿ ಬೆಣ್ಣೆ ಹಳ್ಳಪ್ರವಾಹ ತಡೆಯಲು 200 ಕೋಟಿ ಅನುದಾನ ಬಿಡುಗಡೆಯಾಗಿದೆ. ನವಲಗುಂದ ನಗರದ ಬಡಜನತೆಗೆ ಆಶ್ರಯ ಯೋಜನೆ ಜಾರಿಗೆ ಭೂಮಿ ಖರೀದಿಸಲು 5.5 ಕೋಟಿ, ಅಲ್ಪಸಂಖ್ಯಾತ ಇಲಾಖೆಯಿಂದ 5 ಕೋಟಿ, 25 ಕೋಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ವಿಶೇಷ ಅನುದಾನ, ಚಕ್ಕಡಿ ರಸ್ತೆ , ನವಲಗುಂದ ಹೈಟೇಕ್ ಬೈಪಾಸಿಗೆ ಅಂದಾಜು 400 ಕೋಟಿ ಅನುದಾನ ಪಡೆಯಲು ಅನುಮತಿ ಪಡೆದಿದ್ದೇವೆ ಹಲವು ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಇದೆ ವೇಳೆ ತಾಲುಕಿನ ಹನಸಿ ಗ್ರಾಮದಲ್ಲಿ ಮನೆ ಕುಸಿತ ದಿನದ ಜೀವ ಕಳೆದುಕೊಂಡ ಮಂಗಳಾ ಪಾಟಿಲ ಅವರ ಮನೆ ನಿರ್ಮಾಣಕ್ಕೆ 1.20 ಲಕ್ಷ ಪರಿಹಾರದ ಚೆಕ್ ವಿತರಿಸಿದರು.
ಈ ವೇಳೆ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಶೀಲ್ದಾರ ಸುಧೀರ ಸಾವಕಾರ, ಮಂಜುನಾಥ ದಾಸಪ್ಪನವರ, ಜೆ.ಬಿ. ಮಜ್ಜಗಿ, ಅಣ್ಣಿಗೇರಿ ಭ್ಯಾಗ್ಯಶ್ರೀ ಜಾಗೀರದಾರ. ಯಶವಂತಕುಮಾರ, ಸಿಪಿಐ ರವಿ ಕಪ್ಪತ್ತನವರ, ವರ್ಧಮಾನಗೌಡ ಹಿರೇಗೌಡ್ರ, ಶಿವಾನಂದ ಭೂಮಣ್ಣವರ, ಕೆಡಿಪಿ ಸದಸ್ಯರುಗಳಾದ ಬಸವರಾಜ ನರನರಗುಂದ, ಸಿರಾಜುದ್ದೀನ ಧಾರವಾಡ, ಸೋಮಣ್ಣ ಸಿದ್ನಾಳ, ಬಸವರಾಜ ಬೀರಣ್ಣವರ, ಖಾದರಸಾಬ ಮುಳಗುಂದ, ನಿಜಲಿಂಗಪ್, ಮಂಜುನಾಥ ಗಾಣಿಗೇರ, ಶ್ರೀಮತಿ ನಂದಿನಿ ಹಾದಿಮನಿ, , ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಬಾಕ್ಸ್ –
ಅಧಿಕಾರಿಗಳಾಗಿ ತರಾಟೆ ತೆಗೆದುಕೊಂಡ ಶಾಸಕರು
ಸರ್ಕಾರದ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಲು ನಡೆಯುವ ತಾಲ್ಲೂಕು ಮಟ್ಟದ ಕೆಡಿಪಿ ಸಭೆಗೆ ಇಲಾಖೆಗಳ ಮುಖ್ಯಸ್ಥರು ಖುದ್ದು ಹಾಜರಿದ್ದು ವರದಿ ನೀಡಬೇಕೆಂಬ ನಿಯಮವಿದ್ದರೂ ಸಮಯ ಪಾಲನೆ ಮಾಡದ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದರು.